ಸುದ್ದಿಗಳು

ಪೋಕ್ಸೊ ಪ್ರಕರಣದ ಸಂತ್ರಸ್ತೆಯ ವ್ಯಾಸಂಗಕ್ಕಾಗಿ ₹1 ಲಕ್ಷ ಮಧ್ಯಂತರ ಪರಿಹಾರ ನೀಡಿದ ಸೋನಿಪತ್ ನ್ಯಾಯಾಲಯ

ಸಂವಿಧಾನದತ್ತ ಹಕ್ಕಾದ ಶಿಕ್ಷಣ ಆಕೆಯ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿತು.

Bar & Bench

ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಪೋಕ್ಸೊ ಪ್ರಕರಣದ ಸಂತ್ರಸ್ತೆ 17 ವರ್ಷದ ಬಾಲಕಿ ಶಿಕ್ಷಣ ಮುಂದುವರೆಸುವುದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಧ್ಯಂತರ ಪರಿಹಾರ ರೂಪದಲ್ಲಿ ₹1 ಲಕ್ಷ ನೀಡುವಂತೆ ಹರಿಯಾಣ ಸರ್ಕಾರಕ್ಕೆ ಈಚೆಗೆ ಸೋನಿಪತ್‌ನಲ್ಲಿರುವ ವಿಚಾರಣಾ ನ್ಯಾಯಾಲಯ ಆದೇಶಿಸಿದೆ.

ಸಂವಿಧಾನದತ್ತ ಹಕ್ಕಾದ ಶಿಕ್ಷಣ ಆಕೆಯ ಮೂಲಭೂತ ಹಕ್ಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನರೇಂದರ್ ತಿಳಿಸಿದ್ದಾರೆ.

ಸಂತ್ರಸ್ತೆ ವೃತ್ತಿಪರ ತರಬೇತಿ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರವೇ ಪರಿಹಾರ ಮೊತ್ತವನ್ನು ಬಳಸುವಂತೆ ಸೂಚಿಸಿದ್ದು ಪ್ರಕರಣದ ವಿಚಾರಣೆಯ ಕೊನೆಯಲ್ಲಿ ನೀಡಲಾಗುವ ಅಂತಿಮ ಪರಿಹಾರದ ಮೊತ್ತಕ್ಕೆ ಈ ಮೊತ್ತವನ್ನು ಸರಿಹೊಂದಿಸಬಹುದು ಎಂದು ಸರ್ಕಾರಕ್ಕೆ ಅದು ಸಲಹೆ ನೀಡಿತು.

 ಹದಿನೇಳು ವರ್ಷದ ಸಂತ್ರಸ್ತ ಬಾಲಕಿ ಮನೆಗೆಲಸದಲ್ಲಿ ತೊಡಗಿದ್ದಾಗ ಆಕೆಯ ಉದ್ಯೋಗದಾತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು. ಉದ್ಯೋಗದಾತ ಹಾಗೂ ಆತ ವಾಸಿಸುತ್ತಿದ್ದ ವಸತಿ ಸಮುಚ್ಛಯದ ನೆರೆ ಹೊರೆಯವರಿಂದ ಆಕೆಯ ಕುಟುಂಬಕ್ಕೆ ಬೆದರಿಕೆಗಳು ಬಂದಿವೆ. ಸಂತ್ರಸ್ತೆ ತೀವ್ರ ಆಘಾತಕ್ಕೆ ತುತ್ತಾಗಿದ್ದು ಆಕೆ ಕೆಲಸ ಮುಂದುವರೆಸಲು ಸಾಧ್ಯವಿಲ್ಲ. ಅಲ್ಲದೆ ಮನೆ ಸಹಾಯಕಿಯಾಗಿರುವ ಆಕೆಯ ತಾಯಿ ಕೂಡ ಘಟನೆಯ ಬಳಿಕ ಮನೆಗೆಲಸ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ತಂದೆ ಕೂಡ ದಿನಗೂಲಿಯಾಗಿದ್ದು ಸಂತ್ರಸ್ತೆಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ಬೇಕು ಎಂದು ವಾದಿಸಲಾಗಿತ್ತು.

 ಆದರೆ ಈ ಮನವಿಯನ್ನು ಸರ್ಕಾರ ಮತ್ತು ಆರೋಪಿ ಇಬ್ಬರೂ ವಿರೋಧಿಸಿದರು. ಇದೊಂದು ಸುಳ್ಳು ಪ್ರಕರಣ ಎಂದು ಆರೋಪಿ ವಾದಿಸಿದರೆ ಸಂತ್ರಸ್ತೆಯ ಕುಟುಂಬಸ್ಥರು ತಮ್ಮ ಕುಟುಂಬ ಪೋಷಿಸುವುದಕ್ಕಾಗಿ ಕೆಲಸ ಮುಂದುವರೆಸಲು ಸಾಧ್ಯವಾಗಲು ಎನ್ನುವುದಕ್ಕೆ ಪುರಾವೆಗಳಿಲ್ಲ ಎಂದು ಸರ್ಕಾರ ವಾದಿಸಿತು.

ಅಲ್ಲದೆ ಸಂತ್ರಸ್ತೆಗೆ ಈಗಾಗಲೇ  ಮಕ್ಕಳ ಕಲ್ಯಾಣ ಸಮಿತಿಯಿಂದ ₹20,000 ಪರಿಹಾರ ನೀಡಲಾಗಿದೆ. ಈ ಬಗೆಯ ಎಲ್ಲಾ ಪ್ರಕರಣಗಳಲ್ಲಿಯೂ ಸರ್ಕಾರ ಮಧ್ಯಂತರ ಪರಿಹಾರ ನೀಡುತ್ತಾ ಹೋದರೆ ಸರ್ಕಾರದ ಬೊಕ್ಕಸಕ್ಕೆ ಅಪಾರ ಹೊರೆಯಾಗುತ್ತದೆ ಎಂದು ಅದು ಹೇಳಿತು.

 ಈ ವಾದಗಳನ್ನು ಒಪ್ಪದ ನ್ಯಾಯಾಲಯ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಆರ್ಥಿಕ ಸ್ಥಿತಿ ಕಳಪೆಯಾಗಿದ್ದು ಆಕೆ ತನ್ನ ವ್ಯಾಸಂಗ ಮುಂದುವರೆಸುವುದಕ್ಕಾಗಿ ಆಕೆಗೆ ಆರ್ಥಿಕ ನೆರವು ಬೇಕಿದೆ ಎಂದ ಅದು ಮಧ್ಯಂತರ ಪರಿಹಾರವಾಗಿ ₹1 ಲಕ್ಷ ಪಾವತಿಸಲು ಸರ್ಕಾರಕ್ಕೆ ಆದೇಶಿಸಿತು.

" ಸಂವಿಧಾನ ನೀಡಿದ ಆದೇಶದ ಪ್ರಕಾರ ಶಿಕ್ಷಣ ಪಡೆಯುವುದು ಆಕೆಯ ಮೂಲಭೂತ ಹಕ್ಕು. ಹೀಗಾಗಿ, ಒಟ್ಟಾರೆಯಾಗಿ ಹೇಳುವುದಾದರೆ ಪೋಕ್ಸೊ ಕಾಯಿದೆಯ ಸೆಕ್ಷನ್ 33(*) ಮತ್ತು ಪೋಕ್ಸೊ ಕಾಯಿದೆ 2020ರ ನಿಯಮ 9(3)ರ ಅಡಿಯಲ್ಲಿ ಮಧ್ಯಂತರ ಪರಿಹಾರವಾಗಿ ₹1,00,000/- ಮೊತ್ತ ಸರಿಎನಿಸುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಗಮನಾರ್ಹವಾಗಿ, ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಜಿಂದಾಲ್ ಗ್ಲೋಬಲ್ ಕಾನೂನು ಶಾಲೆಯ (JGLS) ಮಕ್ಕಳ ಹಕ್ಕುಗಳ ಕೇಂದ್ರ ಕಾನೂನು ನೆರವು ನೀಡಿತ್ತು.