ಹೈಬ್ರಿಡ್ ವಿಧಾನದ ಮೂಲಕ ವಿಚಾರಣೆ ನಡೆಸಲು ಅನುವು ಮಾಡಿಕೊಡುವ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಪ್ರಶ್ನಿಸಿ ಸುಪ್ರೀಂಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಲೇವಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಆರ್ ಸುಭಾಷ್ ರೆಡ್ಡಿ ಅವರಿದ್ದ ಪೀಠ "ಈ ವಿಷಯ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಕ್ಕೆ ಸಂಬಂಧಿಸಿದೆ. ಸಮಸ್ಯೆಯನ್ನು ವಕೀಲರ ವರ್ಗ ಸರಿಪಡಿಸಿಕೊಳ್ಳಬೇಕಿದೆ. ನ್ಯಾಯಾಂಗದ ಕಡೆಯಿಂದ ಈ ಕುರಿತು ಮಾಡಬಹುದದ್ದು ಹೆಚ್ಚೇನೂ ಇಲ್ಲ” ಎಂದು ಹೇಳಿತು.
ಪ್ರತಿಭಟನೆಯ ಹಾದಿ ತುಳಿಯದೇ ಬೇರೆ ದಾರಿಯಿಲ್ಲವಿಕಾಸ್ ಸಿಂಗ್, ಎಸ್ಸಿಬಿಎ ಅಧ್ಯಕ್ಷ
ಆದರೆ ಆದೇಶಕ್ಕೆ ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಮಾರ್ಗ ಅನುಸರಿಸಿದೇ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.
ಆದೇಶವನ್ನು ಓದುತ್ತಿದ್ದಂತೆ ಆದೇಶವನ್ನು ಮರುಪರಿಶೀಲಿಸುವಂತೆ ವಿವಿಧ ಪಕ್ಷಗಳ ಪರವಾಗಿ ಹಾಜರಾದ ವಕೀಲರು ನ್ಯಾಯಾಲಯವನ್ನು ಕೋರಿದರು. ಎಸ್‌ಸಿಬಿಎ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮಹಾಲಕ್ಷ್ಮೀ ಪಾವನಿ ಅವರು ಎಸ್‌ಒಪಿ ಅಂತಿಮಗೊಳಿಸುವುದಕ್ಕಾಗಿ ನಡೆಸಿದ ಸಮಾಲೋಚನೆಗಳಲ್ಲಿ ಎಸ್‌ಸಿಬಿಎ ಅಧ್ಯಕ್ಷರನ್ನು ಪರಿಗಣಿಸಿರಲಿಲ್ಲ ಎಂದರು.
“ತಾನು ಕಾನೂನಿಗೆ ಅತೀತ ಎಂದು ಸುಪ್ರೀಂಕೋರ್ಟ್ ಭಾವಿಸುವುದಾದರೆ ನಾವು ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ”ವಿಕಾಸ್ ಸಿಂಗ್, ಎಸ್ಸಿಬಿಎ ಅಧ್ಯಕ್ಷ
ವಿಚಾರಣಾ ನ್ಯಾಯಾಲಯಗಳಲ್ಲಿ ಹೈಬ್ರಿಡ್ ವಿಚಾರಣೆಗೆ ಸೌಲಭ್ಯಗಳ ಕೊರತೆ ಇರುವುದಾಗಿ ಮತ್ತೊಬ್ಬ ಹಿರಿಯ ನ್ಯಾಯವಾದಿ ಗೀತಾ ಲೂತ್ರಾ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೌಲ್, “ಈ ಸಮಸ್ಯೆಯನ್ನು ಆಡಳಿತಾತ್ಮಕ ನೆಲೆಯಿಂದ ನಿರ್ಧರಿಸಬೇಕಿದೆ. ಎಲ್ಲದಕ್ಕೂ ನೀವು ನ್ಯಾಯಾಂಗದ ಕಡೆಯಿಂದ ಪರಿಹಾರ ಪಡೆಯಲು ಸಾಧ್ಯವಿಲ್ಲ” ಎಂದರು.
ನ್ಯಾಯಾಲಯ ಆದೇಶ ಪ್ರಕಟಿಸಿದ ಬಳಿಕ ಕಲಾಪದಿಂದ ಹೊರನಡೆದ ಸಿಂಗ್ ಮರಳಿ ಬಂದು “ತಾನು ಕಾನೂನಿಗೆ ಅತೀತ ಎಂದು ಸುಪ್ರೀಂಕೋರ್ಟ್ ಭಾವಿಸುವುದಾದರೆ ನಾವು ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ” ಎಂದರು. ಇದಕ್ಕೆ ಆಕ್ಷೇಪಿಸಿದ ಪೀಠ “ಈ ಧೋರಣೆ ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ” ಎಂದು ಹೇಳಿ ಎಸ್‌ಸಿಬಿಎ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಪ್ರಕರಣಗಳನ್ನು ವಿಲೇವಾರಿ ಮಾಡಿತು.
ಹೈಬ್ರಿಡ್ ವಿಚಾರಣೆಗೆ ಬೆಂಬಲ
ಎಸ್‌ಸಿಬಿಎ ಮನವಿಯ ಜೊತೆಗೆ, ಚೆನ್ನೈ ಮೂಲದ ವಕೀಲರ ಸಂಘಟನೆಯಾದ ಆಲ್ ಇಂಡಿಯಾ ಅಸೋಸಿಯೇಷನ್ ಆಫ್ ಜ್ಯೂರಿಸ್ಟ್‌ಗಳ (ಎಐಎಜೆ) ಮನವಿಯನ್ನು ಕೂಡ ನ್ಯಾಯಾಲಯ ಆಲಿಸಿತು. ಭೌತಿಕ ವಿಚಾರಣೆ ಆರಂಭವಾದ ಬಳಿಕವೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಕೀಲರು / ದಾವೆದಾರರು ಸುಪ್ರೀಂ ಕೋರ್ಟ್‌ಗೆ ಹಾಜರಾಗಲು ನೀಡಿರುವ ಆಯ್ಕೆಯನ್ನು ʼಹಕ್ಕಿನ ವಿಷಯʼ ಎಂಬಂತೆ ಮುಂದುವರೆಸಬೇಕೆಂದು ಕೋರಿದ ಅರ್ಜಿ ಇದಾಗಿತ್ತು.
ಸುಪ್ರೀಂಕೋರ್ಟ್ ಹೊರಡಿಸಿದ್ದ ಹೈಬ್ರಿಡ್ ವಿಚಾರಣೆಯ ಎಸ್‌ಒಪಿಯನ್ನು ಈ ಸಂಘಟನೆಯು ಪರಿಣಾಮಕಾರಿಯಾಗಿ ಬೆಂಬಲಿಸಿ ಅದನ್ನು ಮುಂದುವರೆಸಲು ಕೋರಿತು ಇದರಿಂದ ದೂರದ ಸ್ಥಳಗಳಿಂದ ವಕೀಲರು ಮತ್ತು ದಾವೆ ಹೂಡುವವರು ದೆಹಲಿಗೆ ಬಾರದೆಯೂ ಸುಪ್ರೀಂ ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂಬುದು ಅದರ ನಿಲುವಾಗಿತ್ತು.
ಎಸ್‌ಸಿಬಿಎ ಪ್ರತಿರೋಧಕ್ಕೆ ನೀಡಿದ್ದ ಕಾರಣಗಳು ಹೀಗಿವೆ:
ನ್ಯಾಯದಾನದಲ್ಲಿ ವಕೀಲರ ಪಾಲು ಕೂಡ ಸಮಾನವಾಗಿದ್ದು ವಕೀಲರ ಸಂಘವನ್ನು ಸಂಪರ್ಕಿಸದೆಯೇ ಸುಪ್ರೀಂಕೋರ್ಟ್ ರೆಜಿಸ್ಟ್ರಿ ಹೈಬ್ರಿಡ್ ವಿಚಾರಣೆಗೆ ಅನುಮತಿಸುವ ಎಸ್‌ಒಪಿ ಜಾರಿಗೊಳಿಸಿದೆ ಎಂಬುದು ಎಸ್‌ಸಿಬಿಎ ಅರ್ಜಿಯಲ್ಲಿರುವ ಆಕ್ಷೇಪ.
ವರ್ಚುವಲ್ ವಿಚಾರಣೆಯನ್ನು ಶಾಶ್ವತಗೊಳಿಸಲು ಅನುಮತಿ ನೀಡಿದರೆ ವೃತ್ತಿ ವ್ಯವಸ್ಥೆಗೆ ಧಕ್ಕೆ ತಂದಂತಾಗುತ್ತದೆ. ಏಕರೂಪದ ಅವಕಾಶಗಳಿಗೆ ಇದು ವಿರುದ್ಧವಾಗಿದೆ. ಹೊರವಲಯದವರು ಇಲ್ಲಿ ವಾದಿಸಲು ಅನುಕೂಲ ಮಾಡಿಕೊಡಲಿದೆ, ಅದರೆ ಆ ಹೊರವಲಯಗಳಲ್ಲಿ ಎಸ್‌ಸಿಬಿಎ ಸದಸ್ಯರು ತೆರಳಿ ವಾದಿಸಲು ಅವಕಾಶಗಳ ವಿನಿಯಮದ ಕೊರೆತೆಯಿಂದಾಗಿ ಸಾಧ್ಯವಾಗುವುದಿಲ್ಲ.
ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸಲು ತಕ್ಕುದಾದ ತಾಂತ್ರಿಕ ವ್ಯವಸ್ಥೆ ಎಲ್ಲೆಡೆ ಲಭ್ಯವಿರುವುದು ಅನುಮಾನ. ಇದರಿಂದಲೂ ನ್ಯಾಯದಾನ ವಿಳಂಬವಾಗಬಹುದು.