Soudamini Pethe being felicitated by Justice Satish Sharma, CJ of Delhi HC 
ಸುದ್ದಿಗಳು

ಎಐಬಿಇ ಪರೀಕ್ಷೆ ಉತ್ತೀರ್ಣರಾದ ಪ್ರಥಮ ಶ್ರವಣದೋಷಿ ವಕೀಲೆ ಸೌದಾಮಿನಿ ಆ ಸಂತಸದ ವಿಷಯ ತಿಳಿಯಲು ನಮ್ಮೊಂದಿಗಿಲ್ಲ...

ಸಂಪನ್ಮೂಲಗಳು ಹಾಗೂ ಸರಿಸಮನಾದ ಸ್ಪರ್ಧಾ ವೇದಿಕೆಗಳ ಕೊರತೆಯಿಂದಾಗಿ ಶ್ರವಣದೋಷವುಳ್ಳವರು ಮತ್ತು ಕಿವಿ ಕೇಳುವವರ ನಡುವೆ ಇರುವ ಅಂತರವನ್ನು ತುಂಬುವುದು ವಕೀಲೆ ಪೇಠೆ ಅವರ ಕನಸಾಗಿತ್ತು.

Bar & Bench

ದೆಹಲಿ ವಕೀಲರ ಪರಿಷತ್ತಿಗೆ ನೋಂದಾಯಿತರಾಗಿದ್ದ ಪ್ರಥಮ ಶ್ರವಣದೋಷಿ ವಕೀಲೆ ಸೌದಾಮಿನಿ ಪೇಠೆ ಇತ್ತೀಚೆಗೆ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ (ಎಐಬಿಇ) ಉತ್ತೀರ್ಣರಾಗಿದ್ದರು. ದುರದೃಷ್ಟವಶಾತ್‌ ಪೇಠೆ ಅವರಿಗೆ ಈ ವಿಚಾರ ತಿಳಿಯಲೇ ಇಲ್ಲ. ಪರೀಕ್ಷೆಯ ಫಲಿತಾಂಶ ಬರುವ ಒಂದು ವಾರ ಮುನ್ನ ಅಂದರೆ ಏಪ್ರಿಲ್ 22 ರಂದು ಅವರು ಉಸಿರಾಟದ ತೊಂದರೆಯಿಂದಾಗಿ ಇಹಲೋಕ ತ್ಯಜಿಸಿದರು.

ಶ್ರವಣದೋಷವುಳ್ಳ ಸಮುದಾಯ ಎದುರಿಸುವ ಸವಾಲುಗಳ ಬಗ್ಗೆ ಸಕ್ರಿಯರಾಗಿರುತ್ತಿದ್ದುದಕ್ಕಾಗಿ ಅವರು ಮನ್ನಣೆ ಪಡೆದಿದ್ದರು. ಸಂಪನ್ಮೂಲಗಳು ಹಾಗೂ ಸರಿಸಮನಾದ ಸ್ಪರ್ಧಾ ವೇದಿಕೆಗಳ ಕೊರತೆಯಿಂದಾಗಿ ಕಿವುಡರು ಮತ್ತು ಕಿವಿ ಕೇಳುವವರ ನಡುವೆ ಇರುವ ಅಂತರವನ್ನು ತುಂಬುವುದು ವಕೀಲೆ ಸೌದಾಮಿನಿ ಅವರ ಕನಸಾಗಿತ್ತು. 

ಸೌದಾಮಿನಿ ಅವರೊಂದಿಗೆ ಕೆಲಸ ಮಾಡಿದ ಅಡ್ವೊಕೇಟ್-ಆನ್-ರೆಕಾರ್ಡ್ ಸಂಚಿತಾ ಅಯ್ನ್‌ ಅವರು ತಮ್ಮ ಸ್ನೇಹಿತೆಯನ್ನು ಪ್ರೀತಿಯಿಂದ ಸ್ಮರಿಸಿದ್ದು ಹೀಗೆ:

“ಸುಪ್ರೀಂ ಕೋರ್ಟ್‌ಗೆ ಬಂದು ದುಭಾಷಿಯ ಸಹಾಯದೊಂದಿಗೆ ನನ್ನ ಪ್ರಕರಣವನ್ನು ವಾದಿಸುವಂತೆ ಆಕೆಗೆ ಹೇಳಿದ್ದೆ. ದುರದೃಷ್ಟವಶಾತ್‌ ಆ ದಿನ ಪ್ರಕರಣವನ್ನು ನ್ಯಾಯಾಲಯ ಆಲಿಸಲಿಲ್ಲ. ನಂತರ ಆಕೆಗೆ ದೆಹಲಿ ಹೈಕೋರ್ಟ್‌ನಲ್ಲಿರುವ ನ್ಯಾಷನಲ್ ಅಸೋಸಿಯೇಷನ್ ಆಫ್ ಡೆಫ್ ಮ್ಯಾಟರ್‌ನಲ್ಲಿ ಇರಲು ಹೇಳಿದ್ದೆ. ಆಕೆಗೆ ತುಂಬಾ ಖುಷಿಯಾಗಿತ್ತು. ನ್ಯಾಯಾಲಯದಲ್ಲಿ ತನ್ನ ಮೊದಲ ಭೌತಿಕ ಹಾಜರಿಯ ದಿನವನ್ನು ಆಕೆ ಎಷ್ಟು ಉತ್ಸಾಹದಿಂದ ಎದುರು ನೋಡುತ್ತಿದ್ದಳು ಎಂದರೆ ಕಾಲು ಊನವಾಗಿದ್ದರೂ ಬಂದಿದ್ದಳು! ನಿಮ್ಮ ಸಹವರ್ತಿಯಲ್ಲಿ ಅಂತಹ ಉತ್ಸಾಹವನ್ನು ಎಷ್ಟು ಬಾರಿ ಕಾಣಲು ಸಾಧ್ಯ? ಆಕೆ ಪ್ರಕರಣದಲ್ಲಿ ಪಾಲ್ಗೊಳ್ಳಲು ಮಾಹಿತಿ ದೊರೆತ ಕೂಡಲೇ ಅತ್ಯಲ್ಪ ಅವಧಿಯಲ್ಲಿಯೇ ಕುಂಟುತ್ತ ಫರೀದಾಬಾದ್‌ನಿಂದ ಬಂದಿದ್ದಳು! ನಾವು ವಿವಿಧ ಅಗತ್ಯತೆಗಳ ಪರಿಶೀಲನೆಗಾಗಿ ದುಭಾಷಿಯೊಬ್ಬರ ಸಂಗಡ ಗಾಲಿ ಕುರ್ಚಿಯೊಂದಿಗೆ (ಆಕೆಯ ಕಾಲು ಊನವಾಗಿದ್ದರಿಂದ) ಅನೇಕ ನ್ಯಾಯಾಲಯ ಕೋಣೆಗಳನ್ನು ಪರಿಶೀಲಿಸಿದೆವು” ಎಂದು ಸಂಚಿತಾ ಸ್ಮರಿಸಿಕೊಂಡರು.

Soudamini Pethe with AoR Sanchita Ain

“ಅದೊಮ್ಮೆ ನ್ಯಾಯಾಲಯದ ಕೊಠಡಿಯೊಂದರಲ್ಲಿ ನ್ಯಾಯಮೂರ್ತಿಗಳು ಏನೋ ಹೇಳುತ್ತಿದ್ದರು. ಅದೇನೆಂಬುದು ನಮಗೆ ಕೇಳುತ್ತಿರಲಿಲ್ಲ. ಅವರು ಮೈಕ್‌ ಬಳಸುತ್ತಿಲ್ಲವೇ ಎಂದು ಆಕೆ ನಮ್ಮನ್ನು ಕೇಳಿದಳು. ಅವರು ಬಳಸುತ್ತಿದ್ದರೂ ನಮಗೆ ಕೇಳಿಸುತ್ತಿಲ್ಲ ಎಂದೆ. ಆಗ ಆಕೆ ನಕ್ಕು, “ನನಗಂತೂ ಕೇಳುವುದಿಲ್ಲ. ಈಗ ನಿಮಗೂ ಕೇಳುತ್ತಿಲ್ಲ!” ಎಂದಳು. ಆ ದಿನ ಬಹಳ ನಕ್ಕೆವು. ನ್ಯಾಯಾಲಯಗಳು ತಮ್ಮದೇ ಆದ ದುಭಾಷಿಗಳನ್ನು ಹೊಂದಿಲ್ಲದ ಬಗ್ಗೆ ಆಕೆ ಕಳವಳ ಹೊಂದಿದ್ದರು" ಎಂದು ಸಂಚಿತಾ ವಿವರಿಸಿದರು.

ಸೌಧಾಮಿನಿ ಅವರ ಹಾಸ್ಯ ಸ್ವಭಾವ ಮತ್ತು ದೃಢ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುತ್ತಾ ಅಯ್ನ್‌ ಅವರು “ಆಕೆ ತಾನು ನಿಂತಿದ್ದ ಸ್ಥಳ ತಲುಪಲು ಅನೇಕ ಅಡೆತಡೆಗಳನ್ನು ಎದುರಿಸಿದ್ದಳು, ಖುಲ್ಲಂಖುಲ್ಲಾ ನಗುತ್ತ, ಧೈರ್ಯದಿಂದ, ಉತ್ಸಾಹದಿಂದ ಆ ಹಂತಕ್ಕೆ ತಲುಪಿದ್ದಳು. ವಿಪರ್ಯಾಸವೆಂದರೆ ತಾನು ತಲುಪಿದ ಗಮ್ಯದ ಖುಷಿಯನ್ನು ಅನುಭವಿಸುವ ಮನ್ನವೇ ಆಕೆಯ ಜೀವನ ಇಲ್ಲವಾಯಿತು. ನಾನು ಎಲ್ಲಾ ಕಳೆದುಕೊಂಡೆ ಅನಿಸಿತು" ಎಂದು ಸಂಚಿತಾ ಬೇಸರಿಸಿದರು.

ಮುಂದುವರೆದು, "ಶ್ರವಣದೋಷವುಳ್ಳ ಸಮುದಾಯಕ್ಕೂ ನನಗೂ ಆಕೆ ಸೇತುವೆಯಾಗಿದ್ದಳು. ಈ ಅಂತರವನ್ನು ಕಡಿಮೆ ಮಾಡಿಕೊಳ್ಳಲು ದಾರಿದೀಪವಾದವಳು ಅವಳು. ನಾನು ಸಿಟ್ಟಾದಾಗ ಆಕೆ ತನ್ನ ಎರಡೂ ಕೈ ಎತ್ತಿ ʼಹೋಗಲಿ ಬಿಡುʼ ಎಂದು ಸನ್ನೆ ಮಾಡುತ್ತಿದ್ದಳು. ಹಾಗೆ ಸನ್ನೆ ಮಾಡುವಾಗಲೂ ಅವಳು ಆ ನಗುವನ್ನು ಕಳೆದುಕೊಳ್ಳುತ್ತಿರಲಿಲ್ಲ. ಆಕೆ ನನಗೆ ಪ್ರಶ್ನೆ ಕೇಳುವಾಗ ನಾನು ಕಣ್ಣುಮುಚ್ಚಿ, "ಚಿಂತಿಸಬೇಡ, ಎಲ್ಲವೂ ಆಗುತ್ತದೆ, ಆದಷ್ಟು ಬೇಗನೇ ಆಗುತ್ತದೆ" ಎನ್ನುತ್ತಿದ್ದೆ. ಈಗ ಆ ಸಮುದಾಯದಿಂದ ಮತ್ತಿನ್ನಾರೂ ನಮ್ಮನ್ನು ತೊರೆಯುವುದಕ್ಕು ಮುನ್ನವೇ ಆ ಎಲ್ಲವನ್ನೂ ಸಾಧ್ಯವಾಗಿಸಬೇಕಿದೆ. ಇದು ನನಗೆ ನಾನೇ ಮಾಡಿಕೊಳ್ಳುವ ವಾಗ್ದಾನ" ಎಂದು