Bombay High Court
Bombay High Court  
ಸುದ್ದಿಗಳು

ಅಧಿಕಾರಿಗಳಿಂದ ಅಕ್ರಮ ದಾಳಿ, ಅನೈತಿಕ ಪೊಲೀಸ್‌ಗಿರಿ: ಬಾಂಬೆ ಹೈಕೋರ್ಟ್ ಮೊರೆ ಹೋದ ಸ್ಪಾ ಮಾಲೀಕರ ಸಂಘ

Bar & Bench

ಸ್ಪಾ ಮತ್ತು ಮಸಾಜ್‌ ಪಾರ್ಲರ್‌ಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿದ್ದು ಸೂಕ್ತ ಕಾರಣ, ಸಮರ್ಥನೆ ಹಾಗೂ ಕಾನೂನಿನ ಅನುಮತಿ ಇಲ್ಲದೆ ಪೊಲೀಸ್‌ ಅಧಿಕಾರಿಗಳು ಕಾನೂನುಬಾಹಿರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ದೂರಿ ಸ್ಪಾ ಮಾಲಿಕರ ಸಂಘ- ವೆಲ್‌ನೆಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದೆ.

ಮನಬಂದಂತೆ ದಾಳಿ ನಡೆಸದಿರಲು ಮತ್ತು ಪರವಾನಗಿ ಪಡೆದ ಸ್ಪಾ ಹಾಗೂ ಮಸಾಜ್‌ ಪಾರ್ಲರ್‌ಗಳ ಶಾಂತಿಯುತ ಕಾರ್ಯನಿರ್ವಹಣೆಗೆ ಭಂಗ ತರುವುದನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಅರ್ಜಿ ಕೋರಿದೆ.

ಅರ್ಜಿಯ ಪ್ರಮುಖಾಂಶಗಳು

  • ಅನೈತಿಕ ಮಾನವ ಕಳ್ಳಸಾಗಣೆ ಪತ್ತೆಹಚ್ಚುವ ನೆಪವೊಡ್ಡಿ ಪೊಲೀಸ್‌ ಅಧಿಕಾರಿಗಳು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ದಾಳಿ ಮಾಡುತ್ತಿದ್ದಾರೆ.

  • ಇಂತಹ ದಾಳಿಗಳು ಸಂವಿಧಾನದ 14, 19 ಮತ್ತು 21ನೇ ವಿಧಿಯನ್ನು ಉಲ್ಲಂಘಿಸುತ್ತವೆ.

  • ಸ್ಪಾ ಮಾಲಿಕರಿಂದ ಹಣ ಸುಲಿಗೆ ಮಾಡುವ ಉದ್ದೇಶ ಇರುವ ಅಪರಾಧ ಮನೋಭಾವದ ವ್ಯಕ್ತಿಗಳು ಸಲ್ಲಿಸುವ ದೂರುಗಳನ್ನು ಆಧರಿಸಿ ಮುಂಬೈ ಪೊಲೀಸರು ದಾಳಿ ನಡೆಸುತ್ತಿದ್ದಾರೆ.

  • ಸ್ಪಾ ಮತ್ತು ಮಸಾಜ್ ಸೆಂಟರ್ ವೇಶ್ಯಾಗೃಹಗಳಾಗಿದ್ದು ಅಲ್ಲಿ ಕೆಲಸ ಮಾಡುವ ಹುಡುಗಿಯರು ವೇಶ್ಯೆಯರು ಎಂಬ ಪೂರ್ವಾಗ್ರಹದೊಂದಿಗೆ ಪೊಲೀಸರು ನಿರಂಕುಶವಾಗಿ ತಮ್ಮ ಅಧಿಕಾರ ಚಲಾಯಿಸುತ್ತಿದ್ದು ಸ್ಪಾ ಮಾಲೀಕರು ಹಾಗೂ ಅದರ ಉದ್ಯೋಗಿಗಳಿಗೆ ಇರುವ ಶುಶ್ರೂಷಕರು ಎಂಬ ಪ್ರಸಿದ್ಧಿಯನ್ನು ಸಂಪೂರ್ಣ ಹಾಳುಗೆಡವುತ್ತಿದ್ದಾರೆ.

  • ಈ ಸಂಬಂಧ ಮಹಾರಾಷ್ಟ್ರ ಗೃಹ ಇಲಾಖೆಗೆ ಸಂಘ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

  • ವೆಲ್‌ನೆಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ಅಡಿ ನೋಂದಾಯಿತ ಎಲ್ಲಾ ಸ್ಪಾ / ಆಯುರ್ವೇದ ಕೇಂದ್ರಗಳನ್ನು ಬಾಂಬೆ ಅಂಗಡಿ ಮತ್ತು ಸಂಸ್ಥೆಗಳ ಕಾಯಿದೆಯಡಿ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಪರವಾನಗಿ ಪಡೆದೇ ನಡೆಸಲಾಗುತ್ತಿದೆ. ಇಷ್ಟಾದರೂ ಪರವಾನಗಿ ಪಡೆದ ಸ್ಪಾಗಳನ್ನು ಮುಂಬೈ ಪೊಲೀಸರು ವೇಶ್ಯಾಗೃಹಗಳೆಂಬಂತೆ ಬಿಂಬಿಸುತ್ತಿದ್ದಾರೆ.

  • ನ್ಯಾಯಾಲಯ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಮತ್ತು ಪೊಲೀಸರು ಸಾಕ್ಷ್ಯಾಧಾರಗಳಿಲ್ಲದೆ ದಾಳಿ ನಡೆಸದಂತೆ ನಿರ್ದೇಶನ ನೀಡಬೇಕು.