ವಿಜಯಪುರದಲ್ಲಿ 2014ರಲ್ಲಿ ನಡೆದಿದ್ದ ಕೋಮು ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ 134 ಮಂದಿಯನ್ನು ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ಆರಂಭಿಸಲಾಗಿರುವ ವಿಶೇಷ ನ್ಯಾಯಾಲಯವು ಈಚೆಗೆ ಖುಲಾಸೆಗೊಳಿಸಿದೆ.
ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ 2014ರ ಮೇ 26ರಂದು ವಿಜಯಪುರದಲ್ಲಿ ವಿಜಯೋತ್ಸವದ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ 134 ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಗಲಭೆಯಲ್ಲಿ ಎರಡು ಸಮುದಾಯಗಳ ಮಧ್ಯೆ ಕಲ್ಲು ತೂರಾಟ ನಡೆದಿತ್ತು. ಬೈಕ್ ಮತ್ತು ಇತರೆ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ವಿಜಯಪುರದ ಗಾಂಧಿಚೌಕ್ ಪೋಲಿಸರು ಘಟನೆ ಕುರಿತು ಎರಡು ಪ್ರಕರಣಗಳನ್ನು ದಾಖಲಿಸಿದ್ದರು.
ವಿಜಯಪುರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಚಿಂತನ್ ಹಾಲ್ ಅನ್ನು ವಿಶೇಷ ನ್ಯಾಯಾಲಯವನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಯತ್ನಾಳ್ ಸೇರಿ ಎಲ್ಲಾ ಆರೋಪಿಗಳು ವಿಚಾರಣೆಯಲ್ಲಿ ಭಾಗಿಯಾಗಿದ್ದರು.