Land Grabbing Prohibition Special Court  
ಸುದ್ದಿಗಳು

ಸರ್ಕಾರಿ ಜಮೀನು ಒತ್ತುವರಿ: ಆರೋಪಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ಆರೋಪಿಗೆ ಮಂಜೂರಾಗಿರುವ 30x40 ಅಡಿ ಹೊರತುಪಡಿಸಿ ಉಳಿದ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಬೇಕು. ಈ ಕುರಿತಂತೆ 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ತಹಶೀಲ್ದಾರ್‌ಗೆ ನ್ಯಾಯಾಲಯ ಆದೇಶಿಸಿದೆ.

Bar & Bench

ಬೆಳಗಾವಿ ಜಿಲ್ಲೆ ಕಾಗವಾಡ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಐನಾಪುರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅರ್ಧ ಎಕರೆ (20 ಗುಂಟೆ) ಒತ್ತುವರಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಅಡಿವೆಪ್ಪ ಬಿನ್‌ ಭೂತಾಳಿ ಅಡಿಸೇರಿ ಎಂಬುವರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಒಂದು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದೆ.

ಐನಾಪುರ ಗ್ರಾಮದ ಸರ್ವೇ ನಂಬರ್ 69/ಎ ನಲ್ಲಿರುವ 119.26 ಎಕರೆ ಸರ್ಕಾರಿ ಜಮೀನಿನಲ್ಲಿ 20 ಗುಂಟೆ ಜಮೀನನ್ನು ಅಡಿವೆಪ್ಪ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಕಾಗವಾಡ ತಹಶೀಲ್ದಾರ್ ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಎರಡನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕೆ ಎಚ್‌ ಅಶ್ವತ್ಥ ನಾರಾಯಣ ಗೌಡ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಆರೋಪಿತರು ದಂಡ ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸಬೇಕು. ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನಲ್ಲಿ ಆರೋಪಿಗೆ ಮಂಜೂರಾಗಿರುವ 30x40 ಅಡಿ ಹೊರತುಪಡಿಸಿ ಉಳಿದ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಬೇಕು. ಈ ಕುರಿತಂತೆ 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಕಾಗವಾಡ ತಹಶೀಲ್ದಾರ್‌ಗೆ ನಿರ್ದೇಶಿಸಲಾಗಿದೆ.