Former CM H D Kumaraswamy 
ಸುದ್ದಿಗಳು

ಕ್ವಾರಂಟೈನ್‌ ಅವಧಿಯಲ್ಲಿ ಮನೆಯಿಂದ ಹೊರಬಂದರೆ ಬಂಧನ ವಾರೆಂಟ್‌: ಎಚ್‌ಡಿಕೆಗೆ ಎಚ್ಚರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

ಹಲಗೇವಡೇರಹಳ್ಳಿಯಲ್ಲಿ ಕಾನೂನುಬಾಹಿರವಾಗಿ ಜಮೀನನ್ನು ಡಿನೋಟಿಫಿಕೇಶನ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ 2011ರಲ್ಲಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಎಂ ಮಹಾದೇವಸ್ವಾಮಿ ಎಂಬವರು ಎಚ್‌ಡಿಕೆ ವಿರುದ್ಧ ಖಾಸಗಿ ದೂರು ದಾಖಲಿಸಿದ್ದ ಪ್ರಕರಣವಿದು.

Bar & Bench

ಬೆಂಗಳೂರಿನ ಹಲಗೇವಡೇರಹಳ್ಳಿಯಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ 2.24 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡಿದ ಆರೋಪವು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಮುಖಂಡ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ವಿಚಿತ್ರ ಸಂಕಷ್ಟವನ್ನು ತಂದೊಡ್ಡಿದೆ.

ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಮತ್ತು ಸುರೇಶ್‌ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ದಕ್ಷಿಣ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲೇಬೇಕಿರುವ ಕುಮಾರಸ್ವಾಮಿ ಅವರಿಗೆ ಮನೆಯಿಂದ ಹೊರಬಂದರೆ ಬಂಧನ ವಾರೆಂಟ್‌ ಹೊರಡಿಸುವುದಾಗಿ ಶಾಸಕರು/ಸಂಸದರ ವಿಶೇಷ ನ್ಯಾಯಾಲಯವು ಎಚ್ಚರಿಸಿದೆ. ಏಪ್ರಿಲ್ 17ರವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ನ್ಯಾಯಾಲಯವು ಕುಮಾರಸ್ವಾಮಿ ಅವರಿಗೆ ಆದೇಶಿಸಿದೆ. ಅಂದೇ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಹಲಗೇವಡೇರಹಳ್ಳಿಯಲ್ಲಿ ಕಾನೂನುಬಾಹಿರವಾಗಿ ಜಮೀನನ್ನು ಡಿನೋಟಿಫಿಕೇಶನ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ 2011ರಲ್ಲಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಎಂ ಮಹಾದೇವಸ್ವಾಮಿ ಎಂಬವರು ಕುಮಾರಸ್ವಾಮಿ ಅವರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆಗೆ ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಗೈರಾಗಿದ್ದರು.

ಕುಮಾರಸ್ವಾಮಿ ಅವರ ತಂದೆ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಹಾಗೂ ತಾಯಿ ಚೆನ್ನಮ್ಮ ಅವರಿಗೆ ಕೋವಿಡ್‌ ಪಾಸಿಟಿವ್ ಆಗಿರುವುದರಿಂದ ಎಚ್‌ಡಿಕೆ ಕೂಡ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ವಿಚಾರಣೆಗೆ ಖುದ್ದಾಗಿ ಹಾಜರಾಗುವುದರಿಂದ ಅವರಿಗೆ ವಿನಾಯಿತಿ ನೀಡಬೇಕು ಎಂದು ಕೋರಿ ಕುಮಾರಸ್ವಾಮಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

“ಕ್ವಾರಂಟೈನ್‌ನಲ್ಲಿ ಇದ್ದರೆ ನೀವು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು. ಕ್ವಾರಂಟೈನ್‌ ಸಮಯ ಮುಗಿಯುವವರೆವಿಗೂ ಸಾರ್ವಜನಿಕವಾಗಿ ನಡೆಯುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದು ಅಥವಾ ಬಹಿರಂಗವಾಗಿ ಓಡಾಡುತ್ತಿರುವುದು ಕಂಡುಬಂದರೆ ಬಂಧನ ವಾರೆಂಟ್‌ ಜಾರಿಗೊಳಿಸಲಾಗುವುದು” ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಮನ್ಸ್‌ ಜಾರಿಗೊಳಿಸಿದ್ದನ್ನು ಕುಮಾರಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕುಮಾರಸ್ವಾಮಿ ಅವರ ಮನವಿಯನ್ನು ತಿರಸ್ಕರಿಸಿದ್ದ‌ ಹೈಕೋರ್ಟ್‌, ವಿಚಾರಣೆಗೆ ಒಳಗಾಗುವಂತೆ ಸೂಚಿಸಿತ್ತು. ವಿಚಾರಣೆಗೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿದ್ದ ಕುಮಾರಸ್ವಾಮಿ ಅವರ ಮನವಿಗೂ ನ್ಯಾಯಾಲಯ ಸಮ್ಮತಿಸಿರಲಿಲ್ಲ. ಹೈಕೋರ್ಟ್‌ ಆದೇಶವನ್ನು ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್‌ನಲ್ಲೂ ಪ್ರಶ್ನಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಸಹ ಕುಮಾರಸ್ವಾಮಿ ಅವರ ಮನವಿಯನ್ನು ಮಾನ್ಯ ಮಾಡಿರಲಿಲ್ಲ.