former minister S N Krishnaiah Setty and Bengaluru city civil court 
ಸುದ್ದಿಗಳು

ಎಸ್‌ಬಿಎಂಗೆ ₹7.17 ಕೋಟಿ ವಂಚನೆ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರು ದೋಷಿಗಳು ಎಂದ ವಿಶೇಷ ನ್ಯಾಯಾಲಯ

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ವ್ಯವಸ್ಥಾಪಕ ಹಾಗೂ ಒಂದನೇ ಆರೋಪಿ ಎಂಟಿವಿ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕೆ ಮುನಿರಾಜು, ಕೆ ಶ್ರೀನಿವಾಸ್‌ ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ.

Bar & Bench

ನಕಲಿ ವೇತನ ಸರ್ಟಿಫಿಕೇಟ್‌ಗಳನ್ನು ಸಲ್ಲಿಸಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ₹7.17 ಕೋಟಿ ಹಣ ದುರ್ಬಳಕೆ ಮಾಡಿರುವ ಪ್ರಕರಣದಲ್ಲಿ ವಸತಿ ಮತ್ತು ಮುಜರಾಯಿ ಇಲಾಖೆಯ ಮಾಜಿ ಸಚಿವ ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರನ್ನು ದೋಷಿಗಳು ಎಂದು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಇಂದು ಪ್ರಕಟಿಸಿದರು.

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ವ್ಯವಸ್ಥಾಪಕ ಹಾಗೂ ಒಂದನೇ ಆರೋಪಿ ಎಂಟಿವಿ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕೆ ಮುನಿರಾಜು, ಕೆ ಶ್ರೀನಿವಾಸ್‌ ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ. ಐದನೇ ಆರೋಪಿ ಬಿಡ್ಡಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ. ಶಿಕ್ಷೆ ಪ್ರಮಾಣವನ್ನು ಇನ್ನಷ್ಟೇ ನ್ಯಾಯಾಲಯ ಪ್ರಕಟಿಸಬೇಕಿದ್ದು, ವಿಸ್ತೃತ ಆದೇಶ ಬಿಡುಗಡೆಯಾಗಬೇಕಿದೆ.

ಶೆಟ್ಟಿ ಮತ್ತು ಇತರ ಆರೋಪಿಗಳು ಮೆಸರ್ಸ್‌ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ ಮೂಲಕ ನಕಲಿ ವೇತನ ಸರ್ಟಿಫಿಕೇಟ್‌ಗಳು, ಎಚ್‌ಎಎಲ್‌, ಐಟಿಐ, ಬಿಇಎಂಎಲ್‌, ಬಿಎಂಟಿಸಿ, ಬೆಸ್ಕಾಂ, ಎಡಿಇ, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್‌ ನೋವಾ ಟೆಕ್ನಾಲಜೀಸ್‌ ಇತ್ಯಾದಿ ಸಂಸ್ಥೆಗಳಲ್ಲಿ ಕೆಲಸ ಮಾಡದ ಉದ್ಯೋಗಿಗಳ ಫಾರ್ಮ್‌ ನಂಬರ್‌ 16 ಸಲ್ಲಿಸಿ ₹7.17 ಕೋಟಿ ಮೊತ್ತದ 181 ಗೃಹ ಸಾಲಗಳನ್ನು ಪಡೆದಿದ್ದಾರೆ. ಈ ಪೈಕಿ ವಿವಿಧ ಖಾತೆಗಳ ₹3.53 ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದು, ಆ ಮೂಲಕ ಕಾನೂನುಬಾಹಿರವಾಗಿ ಬ್ಯಾಂಕ್‌ಗೆ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕೆ ಜಿ ರಸ್ತೆಯಲ್ಲಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಮುಖ್ಯ ವಿಚಕ್ಷಣಾಧಿಕಾರಿಯು 30.1.2008ರಂದು ನೀಡಿದ ದೂರು ಆಧರಿಸಿ ಸಿಬಿಐ ಐಪಿಸಿ ಸೆಕ್ಷನ್‌ಗಳಾದ 120ಬಿ, 409, 419, 420, 467 ಮತ್ತು 471 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಪ್ರಕರಣ ದಾಖಲಿಸಿತ್ತು.