ಸುದ್ದಿಗಳು

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಅಪರಾಧಿ ಎಂದ ವಿಶೇಷ ನ್ಯಾಯಾಲಯ

20ನೇ ಆರೋಪಿ ವಾಸುದೇವ ರಾಮ ನಿಲೇಕಣಿ ಮತ್ತು 21ನೇ ಆರೋಪಿ ಸೋಮಶೇಖರ್‌ ಬಸಪ್ಪ ನ್ಯಾಮಗೌಡ ಅವರಿಗೆ ಅನುಮಾನದ ಲಾಭ ನೀಡಿ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ.

Siddesh M S

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಪರಾಧಿಗಳು ಎಂದು ಬುಧವಾರ ತೀರ್ಮಾನಿಸಿ, ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ವಿನಯ್‌ ಕುಲಕರ್ಣಿಗೆ ಭಾರಿ ಹಿನ್ನಡೆಯಾಗಿದ್ದು, ಎಲ್ಲ ಅಪರಾಧಿಗಳನ್ನು ವಶಕ್ಕೆ ಪಡೆದು, ಜೈಲಿಗೆ ಕಳುಹಿಸುವಂತೆ ಸಿಬಿಐಗೆ ನ್ಯಾಯಾಲಯ ನಿರ್ದೇಶಿಸಿದೆ.

ಏಪ್ರಿಲ್‌ 2ರಂದು ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌ ಅವರು ಪ್ರಕಟಿಸಿದ್ದು, ಸುಳ್ಳು ಸಾಕ್ಷಿ ಹೇಳಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶಿಸುವ ಮೂಲಕ ಮಹತ್ವದ ಸಂದೇಶ ರವಾನಿಸಿದೆ.

Santhosh Gajanan Bhat Judge, MP/MLA Special Court

ಆರೋಪಿಗಳಾದ ವಿಕ್ರಮ್‌, ಕೀರ್ತಿ ಕುಮಾರ್‌, ಸಂದೀಪ್‌ ಸವದತ್ತಿ, ವಿನಾಯಕ್‌ ಕಟಗಿ, ಮಹಾಬಲೇಶ್ವರ್‌ ಹೊಂಗಲ್‌ ಅಲಿಯಾಸ್‌ ಮುದಕ, ಸಂತೋಷ್‌ ಸವದತ್ತಿ, ಎಂ ದಿನೇಶ್‌, ಎಸ್‌ ಅಶ್ವತ್‌, ಕೆ ಎಸ್‌ ಸುನೀಲ್‌, ನಜೀರ್‌ ಅಹ್ಮದ್‌, ಶನ್ವಾಜ್‌, ಕೆ ನೂತನ್‌, ಸಿ ಹರ್ಷಿತ್‌, ವಿನಯ್‌ ಕುಲಕರ್ಣಿ, ಚಂದ್ರಶೇಖರ್‌ ಇಂಡಿ ಅಲಿಯಾಸ್‌, ಚಂದ್ರು ಮಾಮ, ವಿಕಾಸ್‌ ಕಲಬುರ್ಗಿ ಮತ್ತು ಚನ್ನಕೇಶವ ಟಿಂಗರಿಕರ್‌ ಅವರು ಯೋಗೀಶ್‌ ಗೌಡ ಕೊಲೆಗೆ ಕ್ರಿಮಿನಲ್‌ ಪಿತೂರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 120ಬಿ ಅಡಿ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ವಿಕ್ರಮ್‌, ಕೀರ್ತಿ ಕುಮಾರ್‌, ಸಂದೀಪ್‌ ಸವದತ್ತಿ, ವಿನಾಯಕ್‌ ಕಟಗಿ, ಮಹಾಬಲೇಶ್ವರ್‌ ಹೊಂಗಲ್‌ ಅಲಿಯಾಸ್‌ ಮುದಕ, ಸಂತೋಷ್‌ ಸವದತ್ತಿ, ಎಂ ದಿನೇಶ್‌, ಎಸ್‌ ಅಶ್ವತ್‌, ಕೆ ಎಸ್‌ ಸುನೀಲ್‌, ನಜೀರ್‌ ಅಹ್ಮದ್‌, ಶನ್ವಾಜ್‌, ಕೆ ನೂತನ್‌, ಸಿ ಹರ್ಷಿತ್‌, ವಿನಯ್‌ ಕುಲಕರ್ಣಿ, ಚಂದ್ರಶೇಖರ್‌ ಇಂಡಿ ಅಲಿಯಾಸ್‌, ಚಂದ್ರು ಮಾಮ ಮತ್ತು ವಿಕಾಸ್‌ ಕಲಬುರ್ಗಿ ಅವರು ಐಪಿಸಿ ಸೆಕ್ಷನ್‌ 302 ಜೊತೆಗೆ 120-B ಅಡಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೇ, ಮೇಲಿನ ಎಲ್ಲಾ ಆರೋಪಿಗಳ ಜೊತೆಗೆ ಚನ್ನಕೇಶವ ಟಿಂಗರಿಕರ್‌ ಸೇರಿ ಎಲ್ಲರೂ ಐಪಿಸಿ ಸೆಕ್ಷನ್‌ 201 ಜೊತೆಗೆ 120B ಜೊತೆಗೆ 149 ಅಡಿ ಅಪರಾಧಿಗಳು ನ್ಯಾಯಾಲಯ ತೀರ್ಮಾನಿಸಿದೆ. 19ನೇ ಆರೋಪಿ ಚನ್ನಕೇಶವ ಟಿಂಗರಿಕರ್‌ ಐಪಿಸಿ ಸೆಕ್ಷನ್‌ 218 ಜೊತೆಗೆ 120-B ಜೊತೆಗೆ149 ಅಡಿ ಅಪರಾಧಿ ಎಂದು ಸಾರಲಾಗಿದೆ.

ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್‌ ಇಂಡಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 3, 5, 8, 25 ಮತ್ತು 29ರ ಅಡಿ ಅಪರಾಧದಿಂದ ಅವರನ್ನು ಖುಲಾಸೆಗೊಳಿಸಲಾಗಿದೆ. 20ನೇ ಆರೋಪಿ ವಾಸುದೇವ ರಾಮ ನಿಲೇಕಣಿ ಮತ್ತು 21ನೇ ಆರೋಪಿ ಸೋಮಶೇಖರ್‌ ಬಸಪ್ಪ ನ್ಯಾಮಗೌಡ ಅವರಿಗೆ ಅನುಮಾನದ ಲಾಭ ನೀಡಿ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ.

ಅಪ್ರೂಪರ್‌ನಿಂದ ಬದಲಾಗಿ ಸಾಕ್ಷಿಯಾಗಿದ್ದ ಆನಂತರ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದ ಶಿವಾನಂದ ಶ್ರೀಶೈಲ ಬಿರಾದರ್‌ನನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅಗತ್ಯ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ನೀಡಿದೆ. ಅಲ್ಲದೇ, ಸಾಕ್ಷಿಗಳಾಗಿದ್ದ ಪೊಲೀಸ್‌ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್‌ ಮತ್ತು ಇತರೆ ಸ್ವತಂತ್ರ ಸಾಕ್ಷಿಗಳಾದ ಡಾ. ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್‌, ವಿನಾಯಕ ಬಿಂಜಿಯವರ್‌, ಮೋಹನ್‌ ಈಚರಪ್ಪ ಮುಲ್ಮುಟ್ಟಳ್‌, ವಿವೇಕಾನಂದ ದಳವಾಯಿ, ನಟರಾಜ್‌ ಸರದೇಸಾಯಿ ಮತ್ತು ವಿಜಯ್‌ ಕುಲಕರ್ಣಿ ಅವರು ಸುಳ್ಳು ಸಾಕ್ಷಿ ಹೇಳಿದ್ದಕ್ಕಾಗಿ ಅವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್‌ 340ರ ಅಡಿ ಪ್ರಕರಣ ದಾಖಲಿಸಲು ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.

ಎಲ್ಲಾ ಅಪರಾಧಿಗನ್ನು ತಕ್ಷಣ ವಶಕ್ಕೆ ಪಡೆದು, ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ಸಿಬಿಐಗೆ ನ್ಯಾಯಾಲಯ ನಿರ್ದೇಶಿಸಿದ್ದು, ಶಿಕ್ಷೆಯ ಪ್ರಮಾಣ ನಿಗದಿಪಡಿಸಲು ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: 2016ರ ಜೂನ್‌ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಗೀಶ್‌ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(B) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(d) ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು.

ಬಸವರಾಜ್‌, ವಿಕ್ರಮ್‌, ಕೀರ್ತಿ ಕುಮಾರ್‌, ಸಂದೀಪ್‌ ಅಲಿಯಾಸ್‌ ಸಂದಿ, ವಿನಾಯಕ್‌, ಮಹಾಬಲೇಶ್ವರ್‌ ಅಲಿಯಾಸ್‌ ಮುದಕ, ಸಂತೋಷ್‌, ಎಂ ದಿನೇಶ್‌, ಎಸ್‌ ಅಶ್ವತ್‌, ಕೆ ಎಸ್‌ ಸುನೀಲ್‌, ನಜೀರ್‌ ಅಹ್ಮದ್‌, ಶನ್ವಾಜ್‌, ಕೆ ನೂತನ್‌, ಸಿ ಹರ್ಷಿತ್‌, ವಿನಯ್‌ ಕುಲಕರ್ಣಿ, ಚಂದ್ರಶೇಖರ್‌ ಇಂಡಿ ಅಲಿಯಾಸ್‌, ಚಂದ್ರು ಮಾಮ, ಶಿವಾನಂದ ಬಿರಾದಾರ್‌, ವಿಕಾಸ್‌ ಕಲಬುರ್ಗಿ, ಚನ್ನಕೇಶವ ಟಿಂಗರಿಕರ್‌, ವಾಸುದೇವ್‌ ರಾಮ ನಿಲೇಕಣಿ ಮತ್ತು ಸೋಮಶೇಖರ್‌ ನ್ಯಾಮಗೌಡ ವಿರುದ್ಧ 26. 05.2023ರಂದು ನ್ಯಾಯಾಲಯವು ಆರೋಪ ನಿಗದಿ ಮಾಡಿತ್ತು.

2020ರ ನವೆಂಬರ್‌ 5ರಂದು ವಿನಯ್‌ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. 2021ರ ಆಗಸ್ಟ್‌ 11ರಂದು ಸುಪ್ರೀಂ ಕೋರ್ಟ್‌ ವಿನಯ್‌ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. 2025ರ ಜೂನ್‌ 7ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಯುತ್ತಿರುವಾಗ ವಿನಯ್‌ ಕುಲಕರ್ಣಿ ಅವರು ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ, ಜಾಮೀನು ರದ್ದುಗೊಳಿಸಿತ್ತು.