ಹಾಸನದ ಮಾಜಿ ಸಂಸದ ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿನ ಸಾಕ್ಷಿಗೆ ಬೆದರಿಕೆ ಕರೆ ಬಂದಿರುವ ಸಂಬಂಧ ತನಿಖೆ ನಡೆಸುವಂತೆ ಅಪರಾಧ ತನಿಖಾ ವಿಭಾಗದ (ಸಿಐಡಿ) ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಆದೇಶಿಸಿದೆ.
ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ 4ನೇ ಸಾಕ್ಷಿಯಾಗಿರುವ 43 ವರ್ಷದ ಸಾಮಾಜಿಕ ಕಾರ್ಯಕರ್ತೆಯ ಹೇಳಿಕೆಯನ್ನು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಬಿ ಶಿವಪ್ರಸಾದ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಎಸ್‌ಐಟಿ ಮುಖ್ಯಸ್ಥರಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿರುವ ನ್ಯಾಯಾಲಯವು 2026ರ ಜುಲೈ 6ರಂದು ಸಾಮಾಜಿಕ ಕಾರ್ಯಕರ್ತೆಯು ಸಾಕ್ಷಿ ನುಡಿದಿದ್ದಾರೆ. ಆಗಸ್ಟ್ 20ರಂದು ಪಾಟೀ ಸವಾಲಿನ ವೇಳೆ ಸಾಕ್ಷಿಯು ಹಿಂದಿನ ಬಾರಿ ವಿಚಾರಣೆಯ ಬಳಿಕ ಆರೋಪಿ ಕಡೆಯವರಿಂದ ಬೆದರಿಕೆ ಫೋನ್ ಕರೆಗಳನ್ನು ಸ್ವೀಕರಿಸಿರುವುದಾಗಿ ಆರೋಪಿಸಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ತನಿಖೆ ನಡೆಸುವಂತೆ ಎಸ್‌ಐಟಿಗೆ ನಿರ್ದೇಶಿಸಿದೆ.
ತಾನು ಸಾಕ್ಷಿ ನುಡಿದ ಬಳಿಕ ತನಗೆ ಮತ್ತು ತನ್ನ ಪುತ್ರನಿಗೆ ಏನಾದರೂ ಆದರೆ ಆರೋಪಿಗಳೇ ಜವಾಬ್ದಾರಿಯಾಗಿದ್ದಾರೆ. ಆರೋಪಿಗಳ ಕಡೆಯಿಂದ ಬೆದರಿಕೆ ಸಾಧ್ಯತೆಯ ಬಗ್ಗೆಯೂ ಆಕೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ನೆಲೆಯಲ್ಲಿ ತನಿಖೆ ನಡೆಸಿ, ಆಕೆಗೆ ಕಾನೂನಿನ ಅಡಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆಯಲ್ಲಿ 2024ರ ಏಪ್ರಿಲ್ 28ರಂದು ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ವಿರುದ್ಧ ಮನೆಕೆಲಸದಾಕೆ ನೀಡಿದ ದೂರಿನ ಅನ್ವಯ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಕಾಲಾನಂತರದಲ್ಲಿ ಪ್ರಕರಣ ವಿಭಜಿಸಿ ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376, 376(2)(k), 354, 354A, 354B, 354D, 506, 509 ಮತ್ತು 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66E ಅಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಎಸ್‌ಐಟಿಯು 100ಕ್ಕೂ ಅಧಿಕ ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತೆ, ಆಕೆಯ ಪುತ್ರ, ಪ್ರಜ್ವಲ್ ಕಾರು ಚಾಲಕನಾಗಿದ್ದ ಕಾರ್ತಿಕ್ ಆನಂತರ ಬೆದರಿಕೆ ಹಾಕಲಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತೆ ರೂಪದಲ್ಲಿ ನಾಲ್ಕನೇ ಸಾಕ್ಷಿಯ ವಿಚಾರಣೆ ನಡೆದಿದೆ. ಸೆಪ್ಟೆಂಬರ್ 2ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪ್ರಜ್ವಲ್‌ನನ್ನು ಇಡಲಾಗಿರುವ ಅತಿಭದ್ರತೆಯ ಬ್ಯಾರಕ್‌ನಲ್ಲಿ ಮೊಬೈಲ್, ಚಾರ್ಜರ್, ಪೆನ್‌ಡ್ರೈವ್ ಮತ್ತಿತರರ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡ ಬೆನ್ನಿಗೇ ಈ ಘಟನೆ ನಡೆದಿದೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗನಾದ ಪ್ರಜ್ವಲ್ 2019 ರಿಂದ 2024ರವರೆಗೆ ಹಾಸನ ಸಂಸದನಾಗಿದ್ದನು. ಮೊದಲಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೇ 2024ರಂದು ಬಂಧಿತನಾಗಿದ್ದ ಪ್ರಜ್ವಲ್‌ನನ್ನು ವಿಶೇಷ ನ್ಯಾಯಾಲಯವು ನಾಲ್ಕು ಪ್ರಕರಣಗಳ ಪೈಕಿ ಒಂದರಲ್ಲಿ 2025ರ ಆಗಸ್ಟ್‌ನಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿದೆ.