Minister Govind Karajol 
ಸುದ್ದಿಗಳು

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತಿತರರ ವಿರುದ್ಧದ ಖಾಸಗಿ ದೂರು ವಜಾ ಮಾಡಿದ ವಿಶೇಷ ನ್ಯಾಯಾಲಯ

ಸಚಿವ ಗೋವಿಂದ ಕಾರಜೋಳ, ಪುತ್ರ ಅರುಣ ಕಾರಜೋಳ ಮತ್ತು ಶಂಕರಪ್ಪ ಕುಲಕರ್ಣಿ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ತಾನು ಬಹಿರಂಗಗೊಳಿಸಿದ್ದು, ಇದರಿಂದ ರಾಜಕೀಯ ಪ್ರೇರಿತವಾಗಿ ತಮ್ಮ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬುದು ದೂರುದಾರ ಆಕ್ಷೇಪ.

Siddesh M S

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಅವರ ಪುತ್ರ, ಬಿಜೆಪಿ ಮುಖಂಡ ಅರುಣ ಕಾರಜೋಳ, ಮುಧೋಳ ಠಾಣೆಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಿರಾದಾರ್‌ ಸೇರಿದಂತೆ 11 ಮಂದಿಯ ವಿರುದ್ದ ಖಾಸಗಿ ದೂರು ದಾಖಲಿಸಲು ಕೋರಿದ್ದ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ವಜಾ ಮಾಡಿದೆ (ಗಣೇಶ್‌ ಅಲಿಯಾಸ್‌ ಗಣಪತಿ ವರ್ಸಸ್‌ ಮಲ್ಲಿಕಾರ್ಜುನ ಬಿರಾದಾರ್‌).

ಮುಧೋಳದ ಗಣೇಶ್‌ ಅಲಿಯಾಸ್‌ ಗಣಪತಿ ಅವರು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಶಾಸಕರು ಹಾಗೂ ಸಂಸದರ ವಿರುದ್ಧದ ಮ್ಯಾಜಿಸ್ಟ್ರೇಟ್‌ ತನಿಖೆ ನಡೆಸಬಹುದಾದ ಪ್ರಕರಣಗಳ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಅರ್ಜಿ ವಜಾ ಮಾಡಿದ್ದಾರೆ.

ಪ್ರತೀಕಾರದ ದೃಷ್ಟಿಯಿಂದ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ್‌ ಬಿರಾದಾರ್‌, ಸಚಿವ ಗೋವಿಂದ ಕಾರಜೋಳ, ಪುತ್ರ ಅರುಣ ಕಾರಜೋಳ, ಶಂಕರಪ್ಪ ಕುಲಕರ್ಣಿ, ಶೇಖರ, ಶ್ರೀದೇವಿ, ಸುನಿಲ್‌, ಪರಶುರಾಮ, ಶ್ರೀಕಂಠ, ಚಂದ್ರಕಾಂತ ಮತ್ತು ಸೈದು ಅವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ. ಇದು ಕಾನೂನಿನ ದುರ್ಬಳಕೆಯಾಗಿದೆ. ದಾಖಲೆಗಳನ್ನು ಆಧರಿಸಿ ದೂರು ದಾಖಲಿಸಿರುವ ಪೊಲೀಸ್‌ ಅಧಿಕಾರಿಯು ರಾಜಕಾರಣಿಗಳ ಜೊತೆಗೂಡಿ ದೂರು ದಾಖಲಿಸಿದ್ದಾರೆ ಎಂಬುದನ್ನು ಪರಿಗಣಿಸಿ ಅಧಿಕಾರಿಯ ವಿರುದ್ಧ ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿ ತನಿಖೆಗೆ ಅನುಮತಿಸಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಕಲ್ಲಪ್ಪ ಎಂಬುವರು ದಾಖಲಿಸಿರುವ ಮೂಲ ದೂರಿನಲ್ಲಿ ಹಾಲಿ ದೂರುದಾರ ಗಣೇಶ್‌ ಅವರ ಪಾತ್ರವಿಲ್ಲ. ಪೊಲೀಸ್‌ ಇನ್ಸ್‌ಪೆಕ್ಟರ್ ಬಿರಾದಾರ್‌ ನಡತೆಯಿಂದ ಕಲ್ಲಪ್ಪ ಅವರಿಗೆ ಸಮಸ್ಯೆಯಾಗಿದ್ದರೆ ಅದನ್ನು ತನಿಖಾಧಿಕಾರಿಯ ಗಮನಕ್ಕೆ ಹೇಳಿಕೆ ದಾಖಲಿಸುವ ವೇಳೆ ತರಬಹುದಾಗಿದೆ. ಇಲ್ಲವೇ, ವಿಚಾರಣೆಯ ಸಂದರ್ಭದಲ್ಲಿ ಅದನ್ನು ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್‌ ಗಮನಕ್ಕೆ ತರಬಹುದಾಗಿದೆ. ಐದನೇ ಆರೋಪಿಯಾಗಿರುವ ಶೇಖರ್‌ ದಾಖಲಿಸಿರುವ ದೂರಿನಲ್ಲಿ ಹಾಲಿ ದೂರುದಾರ ಗಣೇಶ್‌ ಅವರ ಪಾತ್ರವಿದೆ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ತನಿಖೆ ಆದೇಶಿಸಲು ಸಕಾರಣಗಳಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ದೂರಿನ ವಿವರ ಮತ್ತು ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸದೇ ನ್ಯಾಯಾಲಯವು ಯಾಂತ್ರಿಕವಾಗಿ ಪ್ರಕರಣವನ್ನು ತನಿಖೆ ಮಾಡಲು ಆದೇಶಿಸಲಾಗದು. ದೂರಿನಲ್ಲಿನ ಆರೋಪ ಯಾವುದೇ ಅಪರಾಧಕ್ಕೆ ಸಮನಾಗುವುದಿಲ್ಲ. ಸಿಆರ್‌ಪಿಸಿ 197ರ ಅಡಿ ಇನ್‌ಸ್ಪೆಕ್ಟರ್‌ ಬಿರಾದಾರ್‌ ವಿರುದ್ಧ ಸಂಜ್ಞೆ ಅಪರಾಧ ಸ್ವೀಕರಿಸಲು ನಿರ್ಬಂಧವಿದೆ. ಹೀಗಾಗಿ, ಅರ್ಜಿ ಪುರಸ್ಕರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಘಟನೆಯ ಹಿನ್ನೆಲೆ: ಕಲ್ಲಪ್ಪ ಮತ್ತು ಹಾಲಿ ಐದನೇ ಆರೋಪಿಯಾಗಿರುವ ಶೇಖರ್‌ ನಡುವೆ ಗಲಾಟೆಯಾಗಿ, ಒಬ್ಬರು ಮತ್ತೊಬ್ಬರ ವಿರುದ್ಧ ದೂರು ನೀಡಿದ್ದು, ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಕಲ್ಲಪ್ಪ ಅವರ ಪರವಾಗಿರುವ ಹಾಲಿ ದೂರುದಾರ ಗಣೇಶ್‌ ಅವರು ಶೇಖರ್‌ ಅವರ ತಾಯಿ ಹಾಗೂ ಪ್ರಕರಣದ ಆರನೇ ಆರೋಪಿಯಾಗಿರುವ ಶ್ರೀದೇವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶೇಖರ್‌ ದೂರು ದಾಖಲಿಸಿದ್ದರು. ಇನ್ಸ್‌ಪೆಕ್ಟರ್ ಬಿರಾದಾರ್‌ ಅವರು ಸಚಿವ ಗೋವಿಂದ ಕಾರಜೋಳ, ಪುತ್ರ ಅರುಣ ಕಾರಜೋಳ ಮತ್ತು ಶಂಕರಪ್ಪ ಕುಲಕರ್ಣಿ ಅವರ ಆಣತಿಯಂತೆ ಹೆಚ್ಚುವರಿ ಎಫ್‌ಐಆರ್‌ನಲ್ಲಿ ತನ್ನನ್ನು ಆರೋಪಿ ಮಾಡಿದ್ದಾರೆ ಎಂಬುದು ಗಣೇಶ್‌ ಆಕ್ಷೇಪವಾಗಿದೆ.

ಸಚಿವ ಗೋವಿಂದ ಕಾರಜೋಳ, ಪುತ್ರ ಅರುಣ ಕಾರಜೋಳ ಮತ್ತು ಶಂಕರಪ್ಪ ಕುಲಕರ್ಣಿ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಬಹಿರಂಗಗೊಳಿಸಿದ್ದು, ಇದರಿಂದ ರಾಜಕೀಯ ಪ್ರೇರಿತವಾಗಿ ತಮ್ಮ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬುದು ದೂರುದಾರ ಆಕ್ಷೇಪವಾಗಿದ್ದು, ಇಲ್ಲಿ ಅಧಿಕಾರ ದುರ್ಬಳಕೆಯಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ಖಾಸಗಿ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕು ಎಂದು ಗಣೇಶ್‌ ನೀಡಿದ್ದ ದೂರನ್ನು ನ್ಯಾಯಾಲಯ ವಜಾ ಮಾಡಿದೆ.

Ganesh Versus Mallikarjuna Biradar.pdf
Preview