Murugha Sharanaru and Chitradurga court 
ಸುದ್ದಿಗಳು

ಮುರುಘಾ ಶ್ರೀ ನ್ಯಾಯಾಂಗ ಬಂಧನ ಅ.21ರವರೆಗೆ ವಿಸ್ತರಣೆ; ಇನ್ನಿಬ್ಬರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಪ್ರಕರಣದಲ್ಲಿನ ನಾಲ್ಕನೇ ಆರೋಪಿ ಪರಮಶಿವಯ್ಯ ಮತ್ತು ಐದನೇ ಆರೋಪಿ ವಕೀಲ ಎನ್‌ ಗಂಗಾಧರ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಶೇಷ ನ್ಯಾಯಾಲಯವು ಇಂದು ವಜಾ ಮಾಡಿದೆ. ಇದರೊಂದಿಗೆ ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳು ವಜಾಗೊಂಡಂತಾಗಿವೆ.

Bar & Bench

ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದ ಅಡಿ ಬಂಧಿತರಾಗಿರುವ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಎರಡನೇ ಆರೋಪಿ ಅಕ್ಕಮಹಾದೇವಿ ಹಾಸ್ಟೆಲ್‌ ವಾರ್ಡನ್‌ ಎಸ್‌ ರಶ್ಮಿ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್‌ 21ರ ವರೆಗೆ ವಿಸ್ತರಿಸಿ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಸೋಮವಾರ ಆದೇಶ ಮಾಡಿದೆ.

ಸೆಪ್ಟೆಂಬರ್‌ 27ರಂದು ವಿಶೇಷ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ವಿಧಿಸಿದ್ದ ನ್ಯಾಯಾಂಗ ಬಂಧನವು ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇದನ್ನು ಪರಿಗಣಿಸಿದ ಪೀಠವು ಮುರುಘಾ ಶರಣರ ನ್ಯಾಯಾಂಗ ಬಂಧನವನ್ನು ಸತತ ನಾಲ್ಕನೇ ಬಾರಿಗೆ 12 ದಿನಗಳ ಕಾಲ ವಿಸ್ತರಿಸಿತು.

ಸೆಪ್ಟೆಂಬರ್‌ 1ರಂದು ಬಂಧನಕ್ಕೊಳಗಾಗಿದ್ದ ಮುರುಘಾ ಶರಣರನ್ನು ಆರಂಭದಲ್ಲಿ ನಾಲ್ಕು ದಿನಗಳ ಕಾಲ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಆನಂತರ ಸೆಪ್ಟೆಂಬರ್‌ 5ರಿಂದ 14ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಬಳಿಕ ಮತ್ತೆ ಸೆಪ್ಟೆಂಬರ್‌ 27ರವರೆಗೆ, ಆನಂತರ ಅಕ್ಟೋಬರ್‌ 10ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿತ್ತು. ಈಗ ಮತ್ತೊಮ್ಮೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

ಪರಮಶಿವಯ್ಯ-ಗಂಗಾಧರ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಪ್ರಕರಣದಲ್ಲಿನ ನಾಲ್ಕನೇ ಆರೋಪಿ ಪರಮಶಿವಯ್ಯ ಮತ್ತು ಐದನೇ ಆರೋಪಿ ವಕೀಲ ಎನ್‌ ಗಂಗಾಧರ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಶೇಷ ನ್ಯಾಯಾಲಯವು ಇಂದು ವಜಾ ಮಾಡಿದೆ. ಇದರೊಂದಿಗೆ ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳು ವಜಾಗೊಂಡಂತಾಗಿವೆ.