Ranya Rao 
ಸುದ್ದಿಗಳು

ಚಿನ್ನ ಕಳ್ಳ ಸಾಗಣೆ ಪ್ರಕರಣ: ರನ್ಯಾ, ತರುಣ್‌ ರಾಜುಗೆ ಜಾಮೀನು ಮಂಜೂರು; ಕಾಫಿಪೋಸಾ ಅನ್ವಯದಿಂದ ಬಿಡುಗಡೆ ಇಲ್ಲ

ಪ್ರಕರಣದ ಮೊದಲ ಆರೋಪಿ ರನ್ಯಾಳನ್ನು ಮಾರ್ಚ್‌ 4ರಂದು, ಎರಡನೇ ಆರೋಪಿ ತರುಣ್‌ನನ್ನು ಮಾರ್ಚ್‌ 9ರಂದು ಮತ್ತು ಮೂರನೇ ಆರೋಪಿ ಸಾಹಿಲ್‌ ಜೈನ್‌ನನ್ನು ಮಾರ್ಚ್‌ 26ರಂದು ಡಿಆರ್‌ಐ ಬಂಧಿಸಿದೆ.

Bar & Bench

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ಹಾಗೂ ಎರಡನೇ ಆರೋಪಿ ತರುಣ್‌ ಕೊಂದೂರು ರಾಜು ಅವರಿಗೆ ಆರ್ಥಿಕ ಅಪರಾಧಗಳ ವಿಚಾರಣಾ ವಿಶೇಷ ನ್ಯಾಯಾಲಯವು ಮಂಗಳವಾರ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿದೆ. ಆದರೆ, ರನ್ಯಾ, ತರುಣ್‌ ಮತ್ತು ಸಾಹಿಲ್‌ ಸಕಾರಿಯಾ ಜೈನ್‌ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಫಿಪೋಸಾ) ಅನ್ವಯಿಸಿರುವುದರಿಂದ ತಕ್ಷಣಕ್ಕೆ ಅವರು ಜೈಲಿನಿಂದ ಬಿಡುಗಡೆಯಾಗುವುದಿಲ್ಲ.

ರನ್ಯಾ ಮತ್ತು ತರುಣ್‌ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶರಾದ ವಿಶ್ವನಾಥ್‌ ಸಿ. ಗೌಡರ್‌ ಅವರ ಪೀಠ ಪುರಸ್ಕರಿಸಿತು.

ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ನಿಗದಿತ 60 ದಿನಗಳಲ್ಲಿ ದೂರು (ಆರೋಪ ಪಟ್ಟಿ) ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿದೆ. ರನ್ಯಾ ಮತ್ತು ತರುಣ್‌ ಅವರು ತಲಾ ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಪ್ರಕರಣದ ವಿಚಾರಣೆಯ ಎಲ್ಲಾ ದಿನ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ತಿರುಚುವಂತಿಲ್ಲ. ತನಿಖಾಧಿಕಾರಿಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ದೇಶ ತೊರೆಯುವಂತಿಲ್ಲ. ಭವಿಷ್ಯದಲ್ಲಿ ಇಂಥದ್ದೇ ಅಪರಾಧದಲ್ಲಿ ಭಾಗಿಯಾಗುವಂತಿಲ್ಲ. ಈ ಯಾವ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಮೊದಲ ಆರೋಪಿ ರನ್ಯಾಳನ್ನು ಮಾರ್ಚ್‌ 4ರಂದು, ಎರಡನೇ ಆರೋಪಿ ತರುಣ್‌ನನ್ನು ಮಾರ್ಚ್‌ 9ರಂದು ಮತ್ತು ಮೂರನೇ ಆರೋಪಿ ಸಾಹಿಲ್‌ ಜೈನ್‌ನನ್ನು ಮಾರ್ಚ್‌ 26ರಂದು ಡಿಆರ್‌ಐ ಬಂಧಿಸಿತ್ತು. ಈ ಎಲ್ಲಾ ಆರೋಪಿಗಳಿಗೆ ಮ್ಯಾಜಿಸ್ಟ್ರೇಟ್‌, ಸತ್ರ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳು ಜಾಮೀನು ನಿರಾಕರಿಸಿದ್ದವು. ಇದರ ಬೆನ್ನಿಗೇ ಕೇಂದ್ರ ಸರ್ಕಾರವು ಕಾಫಿಪೋಸಾ ಅಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ. ರನ್ಯಾ ಈಗಾಗಲೇ ಕಾಫಿಪೋಸಾ ಅಡಿ ವಶಕ್ಕೆ ಪಡೆದಿರುವುದನ್ನು ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ಮೂಲಕ ಪ್ರಶ್ನಿಸಿದ್ದಾರೆ.

ರನ್ಯಾ ಮತ್ತು ತರುಣ್‌ ಪರವಾಗಿ ಹಿರಿಯ ವಕೀಲ ಕಿರಣ್‌ ಜವಳಿ ವಾದಿಸಿದರು. ಡಿಆರ್‌ಐ ಪರ ಹಿರಿಯ ಸ್ಥಾಯಿ ವಕೀಲ ವಕೀಲರಾದ ಮಧು ಎನ್.ರಾವ್‌ ವಾದಿಸಿದರು.