ಉತ್ತರ ಕರ್ನಾಟಕದ ಪರಿಶಿಷ್ಟ ಕುಟುಂಬಗಳು ಪೀಣ್ಯದ ಅಕ್ಕಮಹಾದೇವಿ ಕೊಳಚೆ ಪ್ರದೇಶದಲ್ಲಿ ಹಾಕಿಕೊಂಡಿದ್ದ ಷೆಡ್‌ಗಳನ್ನು ಜೆಸಿಬಿ ಬಳಸಿ ನಾಶಪಡಿಸಿ, ಅವರ ಮೇಲೆ ಹಲ್ಲೆ ಮಾಡಿ ನಿಂದಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಮುನಿರತ್ನ ಸೇರಿ 7 ಮಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಆರ್ ಶ್ರೀರಾಮ್, ಎನ್ ವಸಂತಕುಮಾರ್, ಸಿ ಚನ್ನಕೇಶವ, ಕೃಷ್ಣ, ನವೀನ್ ಅಲಿಯಾಸ್ ಕೆ ನವೀನ್ ಕುಮಾರ್, ವಿ ಗಂಗಾಧರ್ ಅಲಿಯಾಸ್ ಪೀಣ್ಯಾ ಗಂಗಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪುರಸ್ಕರಿಸಿದ್ದಾರೆ.
ಮುನಿರತ್ನ ಮತ್ತು ಇತರೆ ಆರೋಪಿಗಳು ತಲಾ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ದೂರುದಾರೆ ಅಥವಾ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಆರೋಪಿಗಳು ಬೆದರಿಕೆ ಹಾಕಬಾರದು ಮತ್ತು ತನಿಖೆಗೆ ಅಡ್ಡಿಪಡಿಸಬಾರದು. ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು. ಮೂರು ತಿಂಗಳಿಗೂ ಮುನ್ನ ಅಥವಾ ಆರೋಪ ಪಟ್ಟಿ ಸಲ್ಲಿಸುವವರೆಗೆ ಪ್ರತಿ ತಿಂಗಳ ಎರಡನೇ ಭಾನುವಾರದಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
“ಪ್ರಕರಣದಲ್ಲಿ 15 ದಿನಗಳಾದರೂ ತನಿಖಾ ಸಂಸ್ಥೆಯು ಘಟನೆಯ ಸ್ಥಿತಿಗತಿ ಅರಿಯುವಲ್ಲಿ ವಿಫಲವಾಗಿದೆ ಎಂಬುದು ದುರದೃಷ್ಟಕರ ಬೆಳವಣಿಗೆಯಾಗಿದೆ. ಆರ್‌ಎಂಸಿ ಯಾರ್ಡ್ ಪೊಲೀಸ್ ಇನ್‌ಸ್ಪೆಕ್ಟರ್ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣವನ್ನು ಎಸ್‌ಐಟಿ ನಡೆಸಬೇಕು ಎಂದು ಹೇಳಿದ್ದಾರೆ. ಈ ಸಂಬಂಧ ಎಸ್‌ಐಟಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ಜಾರಿ ಮಾಡಲಾಗಿ, ಅವರು ಇನ್ನೂ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಿ ಆದೇಶಿಸಲಾಗಿಲ್ಲ. ಹೀಗಿರುವಾಗ ಎಸ್‌ಐಟಿ ತನಿಖೆ ನಡೆಸಲಾಗದು ಎಂದಿದ್ದಾರೆ. ಈ ನಡುವೆ ಎಂಟು ಅಮೂಲ್ಯ ದಿನಗಳು ಕಳೆದು ಹೋಗಿವೆ. ಆನಂತರ ಪೊಲೀಸ್ ಮಹಾನಿರ್ದೇಶಕರು ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವರ್ಗಾಯಿಸಿದ್ದಾರೆ. ಆಘಾತಕಾರಿ ವಿಚಾರವೆಂದರೆ ಮೇಲಧಿಕಾರಿಗಳು ಆದೇಶ ಮಾಡಿದ ಹೊರತಾಗಿಯೂ ತನಿಖೆ ನಡೆಸಲು ತನಿಖಾಧಿಕಾರಿ ಗುರುತಿಸಬೇಕು ಎಂಬ ಸಬೂಬು ನೀಡಿ ಎಸ್‌ಐಟಿ ತನಿಖೆ ಆರಂಭಿಸಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ದೂರುದಾರೆಯ ಪರವಾಗಿ ಹಿರಿಯ ವಕೀಲ ಸಿ ಎಚ್ ಹನುಮಂತರಾಯ, ಮುನಿರತ್ನ ಪರವಾಗಿ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಪೀಣ್ಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್ ಪ್ರದೇಶದಲ್ಲಿ ಷೆಡ್‌ಗಳನ್ನು ನಿರ್ಮಿಸಿಕೊಂಡಿದ್ದ ಉತ್ತರ ಕರ್ನಾಟಕದ ಪರಿಶಿಷ್ಟ ಕುಟುಂಬಗಳನ್ನು ಜನವರಿ 20ರಂದು ಮುನಿರತ್ನ ಮತ್ತು ಬೆಂಬಲಿಗರಾದ ವಸಂತಕುಮಾರ್, ಚನ್ನಕೇಶವ, ಗೊರಗುಂಟೆಪಾಳ್ಯದ ನವೀನ, ಶ್ರೀರಾಮ, ಪೀಣ್ಯದ ಕಿಟ್ಟಿ, ಗಂಗಾ ಮತ್ತು ಇತರರು ಕಾನೂನು ಬಾಹಿರವಾಗಿ ಜೆಸಿಬಿ ತಂದು ತೆರವುಗೊಳಿಸಿದ್ದಾರೆ. ಅಂತೆಯೇ, ನನಗೆ ಜಾತಿ ನಿಂದನೆ ಮಾಡಿ ಅಲ್ಲಿದ್ದ ಕೆಲ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರ ಎದೆಗೆ ಮುನಿರತ್ನ ಒದ್ದಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಜನವರಿ 20ರಂದು ದೂರು ನೀಡಿದ್ದರು.
ಈ ದೂರಿನ ಅನ್ವಯ ಆರ್‌ಎಂಸಿ ಯಾರ್ಡ್ ಪೊಲೀಸರು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ ಸೆಕ್ಷನ್‌ಗಳಾದ 324(2), 74, 351(2), 351(3) ಮತ್ತು 190 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ–2014ರ ಸೆಕ್ಷನ್ 3(1), ಆರ್(ಎಸ್) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.