ED and B Nagendra 
ಸುದ್ದಿಗಳು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ: ಮಾಜಿ ಸಚಿವ ಬಿ ನಾಗೇಂದ್ರಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ

ಹಣ ಅಕ್ರಮ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಜಾಮೀನು ಕೋರಿ ನಾಗೇಂದ್ರ ಅವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲಾಗಿದೆ.

Siddesh M S

ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ₹95 ಕೋಟಿ ಹಣ ವರ್ಗಾಯಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ ನಾಗೇಂದ್ರ ಅವರು ಜುಲೈ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. 

ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ನಾಗೇಂದ್ರ ಜಾಮೀನು ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ಸತ್ರ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಇಂದು ಪ್ರಕಟಿಸಿದರು. ಸಮಯಾವಕಾಶ ಕೊರತೆಯ ಹಿನ್ನೆಲೆಯಲ್ಲಿ ನೆಕ್ಕುಂಟಿ ನಾಗರಾಜ್‌ ಅವರ ಜಾಮೀನು ಆದೇಶವನ್ನು ಅಕ್ಟೋಬರ್‌ 16ಕ್ಕೆ ಮುಂದೂಡಲಾಗಿದೆ.

ಹಣ ಅಕ್ರಮ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಜಾಮೀನು ಕೋರಿ ನಾಗೇಂದ್ರ ಅವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲಾಗಿದೆ. ನಾಗೇಂದ್ರ ಅವರು ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.

ನಾಗೇಂದ್ರ ಅವರು ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ನಾಗೇಂದ್ರ ಅವರು ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದ ಅನುಮತಿಯಿಲ್ಲದೇ ರಾಜ್ಯದಿಂದ ಹೊರಹೋಗುವಂತಿಲ್ಲ. ನಾಗೇಂದ್ರ ಅವರು ಯಾವುದೇ ರೀತಿಯಲ್ಲೂ ತನಿಖೆ ಮತ್ತು ಸಾಕ್ಷ್ಯ ತಿರುಚುವ ಕೃತ್ಯದಲ್ಲಿ ಭಾಗಿಯಾಗಬಾರದು. ಇಂಥದ್ದೇ ಬೇರೆ ಅಪರಾಧದಲ್ಲಿ ಭಾಗಿಯಾಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಈ ಪ್ರಕರಣದಲ್ಲಿ ಸೆಪ್ಟೆಂಬರ್‌ 9ರಂದು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್‌ 3 ಮತ್ತು 4ರ ಅಡಿಯ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ 4,970 ಪುಟಗಳ ಆರೋಪ ಪಟ್ಟಿ ಹಾಗೂ 144 ಪುಟಗಳ ದೂರನ್ನು ಸಲ್ಲಿಸಿತ್ತು. ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.

ಜಾರಿ ನಿರ್ದೇಶನಾಲಯದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಮತ್ತು ನಾಗೇಂದ್ರ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ವಾದಿಸಿದ್ದರು. ವಕೀಲ ಗೌರವ್‌ ನವೀನ್‌ ಕುಮಾರ್‌ ತೇಜಸ್ವಿ ಅವರು ನಾಗೇಂದ್ರ ಪರವಾಗಿ ವಕಾಲತ್ತು ಹಾಕಿದ್ದರು.

ನಿಗಮದ ಖಾತೆಯಿಂದ ಒಟ್ಟಾರೆ 84 ಕೋಟಿಯ ಅಕ್ರಮವಾಗಿ ಬಳಕೆ ಮಾಡಲಾಗಿದೆ. ಮಾಜಿ ಸಚಿವ ನಾಗೇಂದ್ರ ಅವರು ನಕಲಿ ಖಾತೆ ಸೃಷ್ಟಿಸಲು ಸೂಚಿಸಿ, ಹಣ ವರ್ಗಾವಣೆ ಮಾಡಲು ನಿರ್ದೇಶಿಸಿದ್ದಾರೆ. ನಾಗೇಂದ್ರ ಸೂಚನೆಯಂತೆ ಪದ್ಮನಾಭ ಅವರಿಂದ ಹಣ ವರ್ಗಾವಣೆಯಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಒಳಸಂಚು ರೂಪಿಸಿದ್ದು, ಆನಂತರ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ಆನಂತರ ವಸಂತ ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ನಾಗೇಂದ್ರ ಸಭೆ ನಡೆಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮನಕ್ಕೆ ಪದ್ಮನಾಭ ಅವರನ್ನು ನಾಗೇಂದ್ರ ಆಪ್ತನಾದ ನೆಕ್ಕಂಟಿ ನಾಗರಾಜ್‌ ಮೂಲಕ ನೇಮಕ ಮಾಡಲಾಗಿತ್ತು ಎಂದು ನಾಗೇಂದ್ರ ವಿರುದ್ಧ ಆರೋಪಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಕೆ ಮಾಡಲಾಗಿದೆ. ನಾಗೇಂದ್ರನ ಆಪ್ತ ಸಹಾಯಕನಾದ 8ನೇ ಆರೋಪಿ ವಿಜಯ್ ಕುಮಾರ್ ಮೊಬೈಲಿನಲ್ಲಿ ಹಣದ ಮೊತ್ತ, ಯಾರಿಗೆಲ್ಲಾ ಪೂರೈಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 20.19 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ. ಈ ಸಂಬಂಧ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಲಾಗಿದೆ ಎನ್ನಲಾಗಿದೆ.