BJP MLA Muniratna and Bengaluru City Civil Court 
ಸುದ್ದಿಗಳು

ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು; ಇತರೆ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಮುನಿರತ್ನ ಅವರು ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಅಷ್ಟೇ ಮೌಲ್ಯದ ಇಬ್ಬರ ಭದ್ರತೆ ಒದಗಿಸಬೇಕು. ಅರ್ಜಿದಾರರು ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

Bar & Bench

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ಇತರೆ ಮೂವರು ಆರೋಪಿಗಳಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮಾಜಿ ಸಚಿವ ಮುನಿರತ್ನ ಅವರ ಜಾಮೀನು ಮತ್ತು ಇತರೆ ಆರೋಪಿಗಳಾದ ಡಿ ವಿಜಯ್‌ ಕುಮಾರ್‌, ಪಿ ಶ್ರೀನಿವಾಸ, ಆರ್‌ ಸುಧಾಕರ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಪುರಸ್ಕರಿಸಿದರು.

ಮುನಿರತ್ನ ಅವರು ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೌಲ್ಯದ ಇಬ್ಬರ ಭದ್ರತೆ ಒದಗಿಸಬೇಕು. ಅರ್ಜಿದಾರ ಮುನಿರತ್ನ ಅವರು ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಯಾವುದೇ ರೀತಿಯಲ್ಲೂ ತನಿಖೆ ಮತ್ತು ಸಾಕ್ಷ್ಯ ತಿರುಚುವ ಕೃತ್ಯದಲ್ಲಿ ಭಾಗಿಯಾಗಬಾರದು. ಇಂಥದ್ದೇ ಬೇರೆ ಅಪರಾಧದಲ್ಲಿ ಭಾಗಿಯಾಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ಅಲ್ಲದೆ, ಆರೋಪ ಪಟ್ಟಿ ಸಲ್ಲಿಸುವವರೆಗೆ ಅಥವಾ ಮೂರು ತಿಂಗಳವರೆಗೆ ಪ್ರತಿ ತಿಂಗಳ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5ರ ನಡುವೆ ಸಂಬಂಧಿತ ಪೊಲೀಸ್‌ ಠಾಣೆಗೆ ತೆರಳಿ ಮುನಿರತ್ನ ಅವರು ಸಹಿ ಹಾಕಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ಅರ್ಜಿದಾರರು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಇದೇ ಷರತ್ತುಗಳನ್ನು ಆರೋಪಿಗಳಾದ ಡಿ ವಿಜಯ್‌ ಕುಮಾರ್‌, ಪಿ ಶ್ರೀನಿವಾಸ, ಆರ್‌ ಸುಧಾಕರ್‌ ಅವರಿಗೂ ನ್ಯಾಯಾಲಯ ಅನ್ವಯಿಸಿದೆ.

ಜಾತಿ ನಿಂದನೆ ಮತ್ತು ಲಂಚ ಪಡೆದ ಎರಡೂ ಪ್ರಕರಣಗಳಲ್ಲಿ ಈಗಾಗಲೇ ಮುನಿರತ್ನ ಅವರಿಗೆ ಜಾಮೀನು ದೊರೆತಿರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪ್ರಕರಣದ ಹಿನ್ನೆಲೆ: ಬಿಜೆಪಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ಮಾಜಿ ಸಚಿವ ಮುನಿರತ್ನ ಸೇರಿ ಆರು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಮುನಿರತ್ನ, ಅವರ ಅಂಗರಕ್ಷಕ ವಿಜಯಕುಮಾರ್‌, ಸುಧಾಕರ್‌, ಕಿರಣ್‌ ಕುಮಾರ್‌, ಲೋಹಿತ್‌ ಗೌಡ, ಮಂಜುನಾಥ್‌ ಮತ್ತು ಲೋಕಿ ಎಂಬವರನ್ನು ಆರೋಪಿಗಳನ್ನಾಗಿಸಲಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 354A, 354C, 376, 506, 504, 120(b), 149, 384, 406, 308 ಅಡಿ ಪ್ರಕರಣ ದಾಖಲಿಸಲಾಗಿದೆ.