Justice V Srishananda and Karnataka HC's Kalburgi Bench
Justice V Srishananda and Karnataka HC's Kalburgi Bench 
ಸುದ್ದಿಗಳು

ಪೋಕ್ಸೊ ಅಪರಾಧಕ್ಕೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವ ಅಧಿಕಾರ ವಿಶೇಷ ನ್ಯಾಯಾಲಯಕ್ಕೆ ಇಲ್ಲ: ಹೈಕೋರ್ಟ್‌

Bar & Bench

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ಅಪರಾಧ ಕೃತ್ಯಕ್ಕೆ ನಿಗದಿತ ಪ್ರಮಾಣದ ಶಿಕ್ಷೆಯನ್ನು ಕಡಿಮೆ ಮಾಡುವ ಯಾವುದೇ ಅಧಿಕಾರ ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಈಚೆಗೆ ಆದೇಶಿಸಿದೆ.

ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಾಲವಾಡಿ ನಿವಾಸಿ ಶೇಖ್ ರೌಫ್ ಎಂಬಾತನಿಗೆ ವಿಚಾರಣಾಧೀನ ಪೋಕ್ಸೊ ವಿಶೇಷ ನ್ಯಾಯಾಲಯವು ಏಳು ವರ್ಷದ ಬದಲಾಗಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಕ್ರಮ ಪ್ರಶ್ನಿಸಿ ಭಾಲ್ಕಿ ಟೌನ್ ಠಾಣಾ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಆರೋಪಿ ಶೇಖ್ ರೌಫ್ ಅನ್ನು ದೋಷಿಯಾಗಿ ತೀರ್ಮಾನಿಸಿರುವ ಪೋಕ್ಸೊ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಆತನಿಗೆ ವಿಧಿಸಲಾಗಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ಏಳು ವರ್ಷಕ್ಕೆ ಹೆಚ್ಚಿಸಿದೆ. ಅಲ್ಲದೆ, ಪೋಕ್ಸೊ ಕಾಯಿದೆಯ ಸೆಕ್ಷನ್ 4 ಅಡಿಯಲ್ಲಿ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧ ಕೃತ್ಯಕ್ಕೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಈ ಅಂಶಗಳನ್ನು ನಿರ್ಲಕ್ಷಿಸಿ ವಿಶೇಷ ನ್ಯಾಯಾಲಯ ಆರೋಪಿಗೆ ಕೇವಲ ಐದು ವರ್ಷ ಜೈಲು ಶಿಕ್ಷೆ ವಿಧಿಸಿರುವ ಕಾನೂನು ಬಾಹಿರ. ಈ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯ ಕಂಡುಬರುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶೇಖ್‌ ರೌಫ್‌ ಅನ್ನು ಅಪರಾಧಿಯಾಗಿ ಪರಿಗಣಿಸಿದ್ದ ಪೋಕ್ಸೊ ವಿಶೇಷ ನ್ಯಾಯಾಲಯ, ಆತನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ, 2015ರ ಸೆಪ್ಟೆಂಬರ್‌ 7ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಭಾಲ್ಕಿ ಟೌನ್ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಸರ್ಕಾರದ ವಿಶೇಷ ಅಭಿಯೋಜಕರು “ಶೇಖ್ ರೌಫ್ ಎಸಗಿರುವ ಅಪರಾಧ ಕೃತ್ಯವನ್ನು ಪ್ರಾಸಿಕ್ಯೂಷನ್ ಎಲ್ಲಾ ಸಾಕ್ಷ್ಯಾಧಾರಗಳ ಸಹಿತ ಸಾಬೀತುಪಡಿಸಿತ್ತು. ಅದನ್ನು ಪರಿಗಣಿಸಿದ ಪೋಕ್ಸೊ ನ್ಯಾಯಾಲಯವು ಶೇಖ್‌ ರೌಫ್ ಅನ್ನು ದೋಷಿಯಾಗಿ ತಿರ್ಮಾನಿಸಿದೆ. ಹೀಗಿದ್ದರೂ ಅಪರಾಧಿಗೆ ಶಿಕ್ಷೆ ಮತ್ತು ದಂಡ ಮೊತ್ತವನ್ನು ಕಾಯಿದೆ ಅಡಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ವಿಧಿಸಿರುವುದು ಸರಿಯಲ್ಲ. ಈ ರೀತಿ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲು ವಿಶೇಷ ನ್ಯಾಯಾಲಯಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ವಾದಿಸಿದ್ದರು.

ಆರೋಪಿಯು 12 ವರ್ಷದ ಬಾಲಕಿ ಮೇಲೆ ಹೀನ ಕೃತ್ಯ ಎಸಗಿ ಆಕೆಯ ಭವಿಷ್ಯವನ್ನೇ ಹಾಳು ಮಾಡಿದ್ದಾನೆ. ಸಮಾಜದಲ್ಲಿನ ಆಕೆಯ ಮರ್ಯಾದೆ-ಗೌರವಕ್ಕೆ ಧಕ್ಕೆ ತಂದಿದ್ದಾನೆ. ಆದ್ದರಿಂದ ವಿಶೇಷ ನ್ಯಾಯಾಲಯವು ವಿಧಿಸಿರುವ ಜೈಲು ಶಿಕ್ಷೆ ಮತ್ತು ದಂಡ ಪ್ರಮಾಣ ತುಂಬಾ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕು ಎಂದು ಕೋರಿದ್ದರು. ಇದನ್ನು ಹೈಕೋರ್ಟ್‌ ಪುರಸ್ಕರಿಸಿದೆ.