CM Siddaramaiah, MUDA, Bengaluru City Civil Court 
ಸುದ್ದಿಗಳು

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯದ ಆದೇಶ

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ನಡೆಸಿ, ಆದೇಶಿಸಿದ್ದಾರೆ. 3 ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಕೆಗೆ ಸೂಚಿಸಿದ್ದಾರೆ.

Bar & Bench

ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಅವರಿಗೆ ಪರಿಹಾರ ರೂಪದಲ್ಲಿ ಅಕ್ರಮವಾಗಿ 14 ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮೂರು ತಿಂಗಳಲ್ಲಿ ನಡೆಸಿ ವರದಿ ಸಲ್ಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಬುಧವಾರ ಆದೇಶಿಸಿದೆ. ಹೀಗಾಗಿ, ಸಿದ್ದರಾಮಯ್ಯ ಸೇರಿ ಇತರೆ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಲಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ನಡೆಸಿದರು.

ಹೈಕೋರ್ಟ್‌ ಮಂಗಳವಾರದ ಆದೇಶದಲ್ಲಿ ಮೇಲ್ನೋಟಕ್ಕೆ ತನಿಖೆಯ ಅಗತ್ಯತೆ ಪ್ರತಿಪಾದಿಸಿರುವುದನ್ನು ಉಲ್ಲೇಖಿಸಿರುವ ವಿಶೇಷ ವಿಚಾರಣಾಧೀನ ನ್ಯಾಯಾಲಯವು ಡಿಸೆಂಬರ್‌ 24ರ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಮೈಸೂರಿನ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ಆದೇಶಿಸಿದೆ. ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ತನಿಖೆಗೆ ಸೂಚಿಸಲು ಇರುವ ಅಧಿಕಾರವನ್ನು ಬಳಸಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ಇದಕ್ಕೂ ಮುನ್ನ, ರಾಜ್ಯಪಾಲರು ತನಿಖೆ ಅನುಮತಿ ನೀಡಿರುವುದನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ ಆದೇಶದ ಪ್ರತಿಯನ್ನು ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು.

ಮೊದಲಿಗೆ ಪ್ರಕರಣದ ಪ್ರಕ್ರಿಯೆಯನ್ನು ಸಿಆರ್‌ಪಿಸಿ ಅಥವಾ ಹೊಸದಾಗಿ ಜಾರಿಯಾಗಿ ಬಿಎನ್‌ಎಸ್‌ ಅಡಿ ನಡೆಸಬೇಕೆ ಎಂಬ ಜಿಜ್ಞಾಸೆಯ ಹಿನ್ನೆಲೆಯಲ್ಲಿ ಕೆಲಕಾಲ ನ್ಯಾಯಾಲಯವು ವಿಚಾರಣೆ ಮುಂದೂಡಿತ್ತು.

ಅಂತಿಮವಾಗಿ ಪೀಠವು ಕೃತ್ಯವು ಬಿಎನ್‌ಎಸ್‌ ಜಾರಿಯಾಗುವುದಕ್ಕೂ ಮುನ್ನ ನಡೆದಿರುವುದರಿಂದ ಸಿಆರ್‌ಪಿಸಿ ಅಡಿ ಪ್ರಕ್ರಿಯೆಯ ಅಡಿ ತನಿಖೆ ಆದೇಶಿಸಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದಾರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಜೆ ದೇವರಾಜು ಹಾಗೂ ಇತರೆ ಹೆಸರಿನಡಿ ಐವರನ್ನು ಆರೋಪಿಗಳನ್ನಾಗಿಸಲಾಗಿದೆ. ಸಿದ್ದರಾಮಯ್ಯ ಮತ್ತು ಇತರೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 120ಬಿ, 166, 403, 406, 420, 426, 465, 468, 340, 351 (ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 61, 188, 314, 316, 318, 324, 336, 340, ಮತ್ತು 351), ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ 1988ರ ಸೆಕ್ಷನ್‌ 9 ‌& 13, ಬೇನಾಮಿ ಆಸ್ತಿ ವರ್ಗಾವಣೆ ನಿಷೇಧ ಕಾಯಿದೆ 1988 ಮತ್ತು ಕರ್ನಾಟಕ ಭೂಮಿ ವಶ (ಗ್ರ್ಯಾಬಿಂಗ್‌) ಕಾಯಿದೆ 2011ರ ಸೆಕ್ಷನ್‌ 3 & 4ರ ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಕೋರಲಾಗಿದೆ.