Azim Premji

 
ಸುದ್ದಿಗಳು

ಪ್ರೇಮ್‌ಜಿ, ಪತ್ನಿ ಹಾಗೂ ಟ್ರಸ್ಟ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ

ವಿದ್ಯಾ, ರೀಗಲ್‌, ನೇಪಿಯನ್‌ ಕಂಪೆನಿಗಳ ಮುಚ್ಚುವಿಕೆ ನಂತರ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಟ್ರಸ್ಟ್‌ಗೆ ವರ್ಗಾಯಿಸಿದ ಪ್ರಕರಣ. ಕಂಪೆನಿ ನಿರ್ದೇಶಕರಾಗಿ ಸಾರ್ವಜನಿಕ ಸೇವೆಯ ಹೊಣೆಗಾರಿಕೆಯಲ್ಲಿ ವಿಶ್ವಾಸ ದ್ರೋಹವೆಸಗಿದ ಅರೋಪ.

Siddesh M S

ಪ್ರತಿಷ್ಠಿತ ವಿಪ್ರೊ ಸಮೂಹದ ಸಂಸ್ಥಾಪಕರಾದ ಅಜೀಂ ಪ್ರೇಮ್‌ಜಿ, ಪತ್ನಿ ಯಾಸ್ಮೀನ್‌ ಪ್ರೇಮ್‌ಜಿ, ಪಿ ಶ್ರೀನಿವಾಸನ್‌ ಮತ್ತು ಅಜೀಂ ಪ್ರೇಮ್‌ಜಿ ಟ್ರಸ್ಟ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ (ಪಿಸಿಎ) ಮತ್ತು ಭಾರತೀಯ ದಂಡ ಸಂಹಿತೆಯ ಅಡಿ ನಂಬಿಕೆ ದ್ರೋಹ ಮತ್ತು ಕ್ರಿಮಿನಲ್‌ ಪಿತೂರಿ ಆರೋಪದ ಮೇಲೆ ಎರಡು ಪ್ರತ್ಯೇಕ ವಿಶೇಷ ಪ್ರಕರಣಗಳನ್ನು ದಾಖಲಿಸಿ, ನಾಲ್ಕೂ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಲು ಪಿಸಿಎ ವಿಶೇಷ ನ್ಯಾಯಾಲಯವು ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.

ಚೆನ್ನೈನ ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಫರೆನ್ಸಿಯ ಪ್ರತಿನಿಧಿ ಪಿ ಸದಾನಂದ ಗೌಡ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಹಾಗೂ ಪಿಸಿಎ ಅಡಿ ಸ್ಥಾಪಿಸಲಾಗಿರುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಲಕ್ಷ್ಮಿನಾರಾಯಣ್‌ ಭಟ್‌ ಕೆ ಅವರು ಆದೇಶ ಮಾಡಿದ್ದಾರೆ.

“ಆರೋಪಿಗಳಾದ ಅಜೀಂ ಪ್ರೇಮ್‌ಜಿ, ಪತ್ನಿ ಯಾಸ್ಮೀನ್‌ ಪ್ರೇಮ್‌ಜಿ, ಪಿ ಶ್ರೀನಿವಾಸನ್‌ ಮತ್ತು ಅಜೀಂ ಪ್ರೇಮ್‌ಜಿ ಟ್ರಸ್ಟ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 13(1)(ಡಿ) ಮತ್ತು 13(2) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 409 (ನಂಬಿಕೆ ದ್ರೋಹ), 120ಬಿ (ಕ್ರಿಮಿನಲ್‌ ಪಿತೂರಿ) ಜೊತೆಗೆ ಸೆಕ್ಷನ್‌ 34ರ (ಸಮಾನ ಉದ್ದೇಶಕ್ಕಾಗಿ ಹಲವರು ಸೇರಿ ಮಾಡುವ ಕೃತ್ಯ) ಅಡಿ ಪ್ರಕರಣ ದಾಖಲಿಸಬೇಕು. ಯಾವುದಾದರೂ ಸಾಕ್ಷಿಯಿದ್ದರೆ ದೂರುದಾರರು ಏಳು ದಿನಗಳ ಒಳಗೆ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಸಿಆರ್‌ಪಿಸಿ ಸೆಕ್ಷನ್‌ 204ರ ಅಡಿ ಪೀಠವು ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ

ಅಜೀಂ ಪ್ರೇಮ್‌ಜಿ, ಯಾಸ್ಮೀನ್‌ ಪ್ರೇಮ್‌ಜಿ, ಪಿ ಶ್ರೀನಿವಾಸನ್‌ ಮತ್ತು ಅಜೀಂ ಪ್ರೇಮ್‌ಜಿ ಟ್ರಸ್ಟ್‌ ವಿರುದ್ಧ 2020ರ ಜೂನ್‌ 22ರಂದು ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಫರೆನ್ಸಿಯ ಪ್ರತಿನಿಧಿ ಪಿ ಸದಾನಂದ ಗೌಡ ಅವರು ಎರಡು ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಪ್ರೇಮ್‌ಜಿ, ಯಾಸ್ಮೀನ್‌ ಮತ್ತು ಶ್ರೀನಿವಾಸನ್‌ ಅವರು ವಿದ್ಯಾ ಇನ್‌ವೆಸ್ಟ್‌ಮೆಂಟ್‌ ಮತ್ತು ಟ್ರೇಡಿಂಗ್‌ ಕಂಪೆನಿ ಪ್ರೈ. ಲಿ., ರೀಗಲ್‌ ಇನ್‌ವೆಸ್ಟ್‌ಮೆಂಟ್‌ ಅಂಡ್‌ ಟ್ರೇಡಿಂಗ್‌ ಕಂಪೆನಿ ಪ್ರೈ.ಲಿ. ಮತ್ತು ನೇಪಿಯನ್‌ ಟ್ರೇಡಿಂಗ್‌ ಅಂಡ್‌ ಇನ್‌ವೆಸ್ಟ್‌ಮೆಂಟ್‌ ಕಂಪೆನಿ ಪ್ರೈ.ಲಿ.ನ ನಿರ್ದೇಶಕರಾಗಿದ್ದರು. ಈ ಮೂರು ಕಂಪೆನಿಗಳನ್ನು1974 ರಲ್ಲಿ ಸೃಷ್ಟಿಸಲಾಗಿದ್ದು, ಆ ಸಂದರ್ಭದಲ್ಲಿ ಪ್ರೇಮ್‌ಜಿ ಮತ್ತು ಅವರ ತಾಯಿ ಇವುಗಳ ನಿರ್ದೇಶಕರಾಗಿದ್ದರು. ಬಳಿಕ ಪ್ರೇಮ್‌ಜಿ ಪತ್ನಿ ಯಾಸ್ಮೀನ್‌ ಅವುಗಳ ನಿರ್ದೇಶಕರಾದರು. 2009ರಲ್ಲಿ ಶ್ರೀನಿವಾಸನ್‌ ಈ ಕಂಪೆನಿಗಳ ನಿರ್ದೇಶಕರಾದರು.

ಕಂಪೆನಿ ಕಾಯಿದೆ 1956ರ ವಿವಿಧ ನಿಬಂಧನೆಗಳ ಅಡಿ ವಿದ್ಯಾ, ರೀಗಲ್‌ ಮತ್ತು ನೇಪಿಯನ್‌ ಕಂಪೆನಿಗಳನ್ನು ಸೃಷ್ಟಿಸಲಾಗಿದ್ದು, ಆರೋಪಿಗಳು ಮಂಡಿಸಿದ ವಿಲೀನ ಪ್ರಸ್ತಾವದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಆದೇಶದ ಅನ್ವಯ ಅವುಗಳನ್ನು ವಿಸರ್ಜಿಸಲಾಗಿತ್ತು. ಈ ದೂರು ದಾಖಲಿಸುವ ಸಂದರ್ಭಕ್ಕೆ ಕಂಪೆನಿಗಳು ಅಸ್ತಿತ್ವದಲ್ಲಿರಲಿಲ್ಲ. ಆ ವಿಲೀನ ಒಪ್ಪಿಗೆಯ ಸಂದರ್ಭದಲ್ಲಿನ ಹಣಕಾಸು ವರ್ಗಾವಣೆಗೆ ಸಂಬಂಧಿಸಿದ ವಿಚಾರವು ಪ್ರಾಸಿಕ್ಯೂಷನ್‌ಗೆ ಒಳಪಟ್ಟಿದೆ.

ವಿದ್ಯಾ, ರೀಗಲ್‌ ಮತ್ತು ನೇಪಿಯನ್‌ ಕಂಪೆನಿಗಳು ಒಂದು ಮತ್ತೊಂದರಲ್ಲಿ ಶೇ. 50 ಪಾಲುದಾರಿಕೆ ಹೊಂದಿದ್ದವು. ಅಲ್ಲದೇ, ಮೂರು ಪಾಲುದಾರಿಕೆ ಸಂಸ್ಥೆಗಳಾದ ಹಶಮ್‌ ಟ್ರೇಡರ್ಸ್‌, ಪಾಜಿಮ್‌ ಟ್ರೇಡರ್ಸ್‌ ಮತ್ತು ಜಶ್‌ ಟ್ರೇಡರ್ಸ್‌ಗಳಲ್ಲಿ ವಿದ್ಯಾ, ರೀಗಲ್‌ ಮತ್ತು ನೇಪಿಯನ್‌ ಶೇ. 35 ಪಾಲುದಾರಿಕೆ ಹೊಂದಿದ್ದವು. ಈ ಮೂರು ಕಂಪೆನಿಗಳನ್ನು ಹೊರತುಪಡಿಸಿ ಬೇರಾರು ಇವುಗಳಲ್ಲಿ ಪಾಲು ಹೊಂದಿರಲಿಲ್ಲ. ವಿದ್ಯಾ, ರೀಗಲ್‌ ಮತ್ತು ನೇಪಿಯನ್‌ ಕಂಪೆನಿಗಳನ್ನು ವಿಸರ್ಜಿಸುವಾಗ ಅವುಗಳಿಗೆ ನಿರ್ದೇಶಕರ ಹೊರತಾಗಿ ಯಾವುದೇ ಮಾಲೀಕರು ಇಲ್ಲದೆ ಇದ್ದುದರಿಂದ ಅವುಗಳ ಸ್ವತ್ತು ಸಂವಿಧಾನದ 296ನೇ ವಿಧಿಯ ಅನ್ವಯ ಭಾರತ ಸರ್ಕಾರದ ಸುಪರ್ದಿಗೆ ಬರಬೇಕಿತ್ತು ಎಂಬದು ಅರ್ಜಿದಾರರ ವಾದ.

ಪ್ರೇಮ್‌ಜಿ, ಯಾಸ್ಮೀನ್‌ ಮತ್ತು ಶ್ರೀನಿವಾಸನ್‌ ಅವರು ಮೂರು ಕಂಪೆನಿಗಳ ನಿರ್ದೇಶಕರಾಗಿದ್ದಾಗ ತಮ್ಮ ಸ್ಥಾನಗಳನ್ನು ದುರ್ಬಳಕೆ ಮಾಡಿಕೊಂಡು ಏನನ್ನೂ ಪರಿಗಣನೆಗೆ ತೆಗೆದುಕೊಳ್ಳದೇ, ಪಿತೂರಿ ನಡೆಸಿ 2013ರ ಫೆಬ್ರವರಿಯಲ್ಲಿ ಈ ಮೊದಲು ಹೇಳಲಾದ ಪಾಲುದಾರಿಕೆ ಸಂಸ್ಥೆಗಳಲ್ಲಿದ್ದ ಅಂದಿನ ದಿನಮಾನದಲ್ಲಿ ರೂ.12,281 ಕೋಟಿ ಮೌಲ್ಯ ಹೊಂದಿದ್ದ 29.5527 ಕೋಟಿ ವಿಪ್ರೊ ಲಿಮಿಟೆಡ್‌ ಷೇರುಗಳನ್ನು ಗಿಫ್ಟ್‌ ರೂಪದಲ್ಲಿ ಅಜೀಂ ಪ್ರೇಮ್‌ಜಿ ಟ್ರಸ್ಟ್‌ಗೆ ವರ್ಗಾಯಿಸಿಕೊಂಡಿದ್ದಾರೆ. ಇಂದಿನ ಅವುಗಳ ಬೆಲೆಯು ರೂ.16,590 ಕೋಟಿ ಆಗಿದೆ.

ಮೂರು ಕಂಪೆನಿಗಳ ಶೇ 35ರಂತೆ ರೂ. ರೂ. 5,807 ಕೋಟಿ ಪಾಲು ಹೊಂದಿದ್ದು ಇವುಗಳ ಒಟ್ಟು ಮೌಲ್ಯ ರೂ.16,590 ಕೋಟಿ ಆಗಿದ್ದು, ಈ ಪ್ರಮಾಣದ ಸಾರ್ವಜನಿಕ ಸ್ವತ್ತನ್ನು ಅಜೀಂ ಪ್ರೇಮ್‌ಜಿ ಟ್ರಸ್ಟ್‌ಗೆ ಪ್ರೇಮ್‌ಜಿ, ಯಾಸ್ಮೀನ್‌ ಮತ್ತು ಶ್ರೀನಿವಾಸನ್‌ ಅವರು ಉಚಿತವಾಗಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

2010ರ ಡಿಸೆಂಬರ್‌ ವೇಳೆಗೆ ವಿಪ್ರೊ ಲಿಮಿಟೆಡ್‌ನಲ್ಲಿ ವಿದ್ಯಾ, ರೀಗಲ್‌ ಮತ್ತು ನೇಪಿಯನ್‌ ಕಂಪೆನಿಗಳು ಹೊಂದಿದ್ದ 9260.18 ಕೋಟಿ ರೂಪಾಯಿ ಮೌಲ್ಯದ ಷೇರುಗಳಲ್ಲಿ 21.3 ಕೋಟಿ ಪಾಲುದಾರಿಕೆ ಷೇರು ತೆಗೆಯಲು ಆರೋಪಿಗಳು ಜಂಟಯಾಗಿ ಸಹಕರಿಸಿದ್ದಾರೆ. ದೂರು ನೀಡುವ ವೇಳೆಗೆ 12061.91 ಕೋಟಿ ರೂಪಾಯಿ ಮೌಲ್ಯದ ಷೇರನ್ನು ಅಜೀಂ ಪ್ರೇಮ್‌ಜಿ ಟ್ರಸ್ಟ್‌ಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

1980ರಿಂದ ಯಾವುದೇ ಮಾಲೀಕರನ್ನು ಹೊಂದಿರದ ವಿದ್ಯಾ, ರೀಗಲ್‌ ಮತ್ತು ನೇಪಿಯನ್‌ ಕಂಪೆನಿಗಳು ಒಟ್ಟಾರೆ 51,549 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಇದು ಸಂಪೂರ್ಣವಾಗಿ ಭಾರತ ಸರ್ಕಾರಕ್ಕೆ ಸೇರಬೇಕು. ಆದರೆ, ಇದನ್ನು ನಾಲ್ಕನೇ ಆರೋಪಿಯಾದ ಪೇಮ್‌ಜಿ ಮತ್ತು ಯಾಸ್ಮೀನ್‌ ಅವರ ನಿಯಂತ್ರಣಕ್ಕೆ ಒಳಪಟ್ಟಿರುವ ಅಜೀಂ ಪ್ರೇಮ್‌ಜಿ ಟ್ರಸ್ಟ್‌ಗೆ 2010, 2013 ಮತ್ತು 2014ರಲ್ಲಿ ವರ್ಗಾಯಿಸಲಾಗಿದೆ ಎಂದು ದೂರುದಾರರು ಆಪಾದಿಸಿದ್ದಾರೆ.

ಕಂಪೆನಿ ನಿರ್ದೇಶಕರಾಗಿ ಸಾರ್ವಜನಿಕ ಸೇವೆಯ ಹೊಣೆಗಾರಿಕೆ ಹೊತ್ತಿದ್ದ ಆರೋಪಿಗಳು ವಿಶ್ವಾಸ ದ್ರೋಹವೆಸಗಿದ ಅರೋಪವು ಮೇಲ್ನೋಟಕ್ಕೆ ಕಂಡು ಬಂದಿರುವುದನ್ನು ಪರಿಗಣಿಸಿರುವ ನ್ಯಾಯಾಲಯವು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿಯ 13(1)(d) ಸೆಕ್ಷನ್‌ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 409, 120B, 34ರ ಕೆಳಗೆ ಕ್ರಮಕ್ಕೆ ಮುಂದಾಗಲು ಸಾಕಷ್ಟು ದಾಖಲೆಗಳಿವೆ ಎಂದಿತು.

India Awake for Transparency versus Azim Hasham Premji and others.pdf
Preview