ಪ್ರತಿಷ್ಠಿತ ವಿಪ್ರೊ ಸಮೂಹದ ಸಂಸ್ಥಾಪಕರಾದ ಅಜೀಂ ಪ್ರೇಮ್‌ಜಿ, ಪತ್ನಿ ಯಾಸ್ಮೀನ್ ಪ್ರೇಮ್‌ಜಿ, ಅಜೀಂ ಪ್ರೇಮ್‌ಜಿ ಟ್ರಸ್ಟ್, ಪ್ರೇಮ್‌ಜಿ ಒಡೆತನದ ಸಂಸ್ಥೆಗಳು, ಪಿ ಶ್ರೀನಿವಾಸನ್ ಹಾಗೂ ಅವುಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ನಂಬಿಕೆ ದ್ರೋಹ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪ ಮಾಡಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಖಾಸಗಿ ದೂರುಗಳನ್ನು ಹಿಂಪಡೆಯಲು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ (ಪಿಸಿಎ) ಅಡಿ ಸ್ಥಾಪಿಸಲಾಗಿರುವ ಬೆಂಗಳೂರಿನ ವಿಶೇಷ ನ್ಯಾಯಾಲಯವು ಚೆನ್ನೈನ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್‌ಫರೆನ್ಸಿ ಸಂಸ್ಥೆಗೆ ಸೋಮವಾರ ಅವಕಾಶ ಮಾಡಿಕೊಟ್ಟಿದೆ. ತಮ್ಮ ವಿರುದ್ಧ ಸುಮಾರು 70 ಪ್ರಕರಣಗಳನ್ನು ದಾಖಲಿಸಿದ್ದ ದೂರುದಾರರನ್ನು ಕ್ಷಮಿಸಿರುವುದಾಗಿ ಈಚೆಗೆ ಸುಪ್ರೀಂ ಕೋರ್ಟ್‌ಗೆ ಅಜೀಂ ಪ್ರೇಮ್‌ಜಿ ತಿಳಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
“ಇಂಡಿಯಾ ಅವೇಕ್ ಫಾರ್ ಟ್ರಾನ್ಸ್‌ಫರೆನ್ಸಿಯ ವಕೀಲ ಆರ್ ಸುಬ್ರಮಣಿಯನ್ ಅವರು ದೂರು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಲ್ಲಿಸಿರುವ ಮೆಮೊಗಳನ್ನು ಪರಿಗಣಿಸಲಾಗಿದೆ. ದೂರು ಹಿಂಪಡೆಯಲು ಅವಕಾಶ ಮಾಡಿಕೊಡಲಾಗಿದೆ” ಎಂದು 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಹಾಗೂ ಪಿಸಿಎ ಅಡಿ ಸ್ಥಾಪಿಸಲಾಗಿರುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಲಕ್ಷ್ಮಿನಾರಾಯಣ್ ಭಟ್ ಕೆ ಅವರು ಆದೇಶದಲ್ಲಿ ಹೇಳಿದ್ದಾರೆ.
“ದೂರುದಾರರು ಮತ್ತು ಆರೋಪಿಗಳಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಸಲ್ಲಿಸಲಾಗಿರುವ ಕ್ರಿಮಿನಲ್ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದೂರು ಹಿಂಪಡೆಯಲಾಗುತ್ತಿದೆ ಎಂದು ಮಾರ್ಚ್ 17ರಂದು ಇಂಡಿಯಾ ಅವೇಕ್ ಫಾರ್ ಟ್ರಾನ್ಸ್‌ಫರೆನ್ಸಿಯು ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಮೆಮೊ ಸಲ್ಲಿಸಿದೆ. ಇದರ ಮುದ್ರಿತ ಪ್ರತಿಯಲ್ಲಿ ಸಹಿ ಮಾಡಿ ದೂರುದಾರರು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಪೀಠವು ಆದೇಶ ಮಾಡಿದೆ.
ಮೊದಲ ಖಾಸಗಿ ದೂರಿನಲ್ಲಿ ಅಜೀಂ ಪ್ರೇಮ್‌ಜಿ, ಅವರ ಪತ್ನಿ ಯಾಸ್ಮೀನ್ ಪ್ರೇಮ್‌ಜಿ, ಪಿ ಶ್ರೀನಿವಾಸನ್, ಹಾಷಮ್ ಇನ್‌ವೆಸ್ಟ್‌ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿ ಪ್ರೈ. ಲಿ. ಹಾಗೂ ಪ್ರಶಾಂತ್ ಶರಣ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.
ಎರಡನೇ ಖಾಸಗಿ ದೂರಿನಲ್ಲಿ ಅಜೀಂ ಪ್ರೇಮ್‌ಜಿ, ಅವರ ಪತ್ನಿ ಯಾಸ್ಮೀನ್ ಪ್ರೇಮ್‌ಜಿ, ಪಿ ಶ್ರೀನಿವಾಸನ್, ಹಾಷಮ್ ಇನ್‌ವೆಸ್ಟ್‌ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿ ಪ್ರೈ. ಲಿ., ತಾರೀಶ್ ಇನ್‌ವೆಸ್ಟ್‌ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿ ಪ್ರೈ. ಲಿ. ಮತ್ತು ಪ್ರಜೀಂ ಇನ್‌ವೆಸ್ಟ್‌ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿ ಪ್ರೈ. ಲಿ. ಅನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.
ಮೂರನೇ ಖಾಸಗಿ ದೂರಿನಲ್ಲಿ ಅಜೀಂ ಪ್ರೇಮ್‌ಜಿ, ಅವರ ಪತ್ನಿ ಯಾಸ್ಮೀನ್ ಪ್ರೇಮ್‌ಜಿ, ಪಿ ಶ್ರೀನಿವಾಸನ್, ಹಾಷಮ್ ಟ್ರೇಡರ್ಸ್, ಪ್ರಜೀಂ ಟ್ರೇಡರ್ಸ್, ದೀಪಕ್ ಗೋಯಲ್, ವಿಜಯ್ ಸಿಂಹ ಅವರನ್ನು ಆರೋಪಿಗಳನ್ನಾಗಿಸಲಾಗಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ (ಪಿಸಿಎ) ಮತ್ತು ಭಾರತೀಯ ದಂಡ ಸಂಹಿತೆಯ ಅಡಿ ನಂಬಿಕೆ ದ್ರೋಹ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ವಿಶೇಷ ಪ್ರಕರಣ ದಾಖಲಿಸಿ, ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ ನ್ಯಾಯಾಲಯ ಆದೇಶ ಮಾಡಿತ್ತು.
ಅಜೀಂ ಪ್ರೇಮ್‌ಜಿ ವಿರುದ್ಧ ಸುಮಾರು 70 ಪ್ರಕರಣಗಳನ್ನು ದಾಖಲಿಸಿದ್ದ ಆರ್ ಸುಬ್ರಮಣಿಯನ್ ವಿರುದ್ಧ ಹೂಡಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮೂರು ವರ್ಷಗಳ ಕಾಲ ಅಮಾನತಿನಲ್ಲಿರಿಸಿ 2022ರ ಮಾರ್ಚ್ 13ರಂದು ಆದೇಶ ಮಾಡಿತ್ತು.
ಸುಬ್ರಮಣಿಯನ್ ಅವರು ತಾವು ಸಲ್ಲಿಸಿದ್ದ ದೂರು ಕ್ಷುಲ್ಲಕ ಎಂದು ಒಪ್ಪಿಕೊಂಡು ಪ್ರೇಮ್‌ಜೀ ಅವರಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದರಿಂದ ಪ್ರೇಮ್‌ಜೀ ವಿರುದ್ಧ ಸುಬ್ರಮಣಿಯನ್ ಸಲ್ಲಿಸಿದ್ದ ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ನ್ಯಾಯಾಲಯ ರದ್ದುಪಡಿಸಿತ್ತು.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ವಿಭಾಗೀಯ ಪೀಠವು “ಅಜೀಂ ಪ್ರೇಮ್‌ಜೀ ಅವರು ಪ್ರಕರಣದ ಬಗ್ಗೆ ರಚನಾತ್ಮಕ ನಿಲುವು ತಳೆದಿದ್ದಾರೆ. ಅದರಲ್ಲಿಯೂ ಸುಬ್ರಮಣಿಯನ್ ಅವರು ಎದುರಿಸಿದ ಹಣಕಾಸಿನ ಸಮಸ್ಯೆಗಳ ದೃಷ್ಟಿಯಿಂದ ಅವರ ಹಿಂದಿನ ನಡೆಯನ್ನು ಕ್ಷಮಿಸಲು ಒಪ್ಪಿದ್ದಾರೆ ಎಂಬುದನ್ನು ತಿಳಿಯಲು ನಾವು ಹರ್ಷ ಪಡುತ್ತೇವೆ ಎಂದು” ಶ್ಲಾಘಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.