ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ನಟಿ ರನ್ಯಾ ರಾವ್ ಜಾಮೀನು ಅರ್ಜಿಯ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಧೀಶರಾದ ವಿಶ್ವನಾಥ್ ಗೌಡರ್ ಇಂದು ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ್ ಜವಳಿ ಅವರು “ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 102 ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅನುಪಾಲಿಸಿಲ್ಲ. ಬಂಧನ ಮೆಮೊವನ್ನು ನೀಡಲಾಗಿಲ್ಲ. ಆಕೆ ನಿದ್ರಿಸುವುದಕ್ಕೆ ಅವಕಾಶ ನೀಡದೇ ಆಕೆಯ ಹೇಳಿಕೆ ದಾಖಲಿಸಿಕೊಂಡಿರುವುದು ಸ್ವಯಂ ಹೇಳಿಕೆಯಾಗುವುದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಆದರೆ, ಉಳಿದ ಇಬ್ಬರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ” ಎಂದು ಆಕ್ಷೇಪಿಸಿದ್ದರು.
ಪ್ರಾಸಿಕ್ಯೂಷನ್ ಪ್ರತಿನಿಧಿಸಿದ್ದ ಹಿರಿಯ ಸ್ಥಾಯಿ ವಕೀಲ ಮಧು ಎನ್ ರಾವ್ ಅವರು “ಕಸ್ಟಮ್ಸ್ ಕಾಯಿದೆಗೆ ಅನುಗುಣವಾಗಿ ರನ್ಯಾರನ್ನು ಬಂಧಿಸಲಾಗಿದೆ. ಒಂದೊಮ್ಮೆ ಕಾಯಿದೆಯನ್ನು ಪಾಲಿಸದಿದ್ದರೂ ಮೇಲ್ನೋಟಕ್ಕೆ ಆರೋಪವಿದ್ದಾಗ ವಶಕ್ಕೆ ಪಡೆಯಲು ಅವಕಾಶವಿದೆ ಎಂದು ಕಾನೂನು ಹೇಳುತ್ತದೆ. ಚಿನ್ನ ಕಳ್ಳ ಸಾಗಣೆಯಲ್ಲಿ ದೊಡ್ಡ ಜಾಲವಿದ್ದು, ಅದನ್ನು ಭೇದಿಸಬೇಕಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ದಾಖಲೆಗಳಿಗೆ ಕಾಯಲಾಗುತ್ತಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ, ಆಕೆಗೆ ಜಾಮೀನು ನಿರಾಕರಿಸಬೇಕು” ಎಂದು ಮನವಿ ಮಾಡಿದ್ದರು.
ಮೂರು ದಿನ ಡಿಆರ್‌ಐ ಕಸ್ಟಡಿಯಲ್ಲಿದ್ದ ರನ್ಯಾರನ್ನು ನ್ಯಾಯಾಲಯವು ಕಳೆದ ಸೋಮವಾರ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ರನ್ಯಾ ಪತಿ ಜತಿನ್ ವಿಜಯಕುಮಾರ್ ಹುಕ್ಕೇರಿ ವಿರುದ್ಧ ಆತುರ ಕ್ರಮಕೈಗೊಳ್ಳದಂತೆ ಹೈಕೋರ್ಟ್ ಈಚೆಗಷ್ಟೇ ಆದೇಶಿಸಿತ್ತು.
ಮಾರ್ಚ್ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ರನ್ಯಾ ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎಂದು ಆರೋಪಿಸಲಾಗಿತ್ತು.
ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ ಅವರು ಅತಿ ಗಣ್ಯ ವ್ಯಕ್ತಿಗಳಿಗೆ ಇರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಸರಾಗವಾಗಿ ಹೊರಬರುತ್ತಿದ್ದರು ಎನ್ನಲಾಗಿದೆ.
ರನ್ಯಾ ಮನೆಯಲ್ಲಿ ಶೋಧ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು ₹2.06 ಕೋಟಿ ಮೌಲ್ಯದ ಆಭರಣ ಮತ್ತು ₹2.67 ಕೋಟಿ ನಗದು ಜಫ್ತಿ ಮಾಡಿದ್ದರು. ಇದರಿಂದ ಪ್ರಕರಣದಲ್ಲಿ ಒಟ್ಟು ಜಫ್ತಿಯು ₹17.29 ಕೋಟಿಗೆ ಏರಿಕೆಯಾಗಿದೆ.
ಇದೆಲ್ಲದರ ನಡುವೆ, ಇಂದು ವಿಶೇಷ ನ್ಯಾಯಾಲಯವು ತರುಣ್ ರಾಜ್‌ರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.