BJP MLA Munirathna and Bengaluru City Civil Court 
ಸುದ್ದಿಗಳು

ಅತ್ಯಾಚಾರ ಮಾಡಿಸಿದ್ದ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ನಿರೀಕ್ಷಣಾ ಜಾಮೀನು ಕೋರಿಕೆ ತಿರಸ್ಕರಿಸಿದ ನ್ಯಾಯಾಲಯ

ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆಯು ದೂರು ದಾಖಲಿಸಿದ್ದರು. ಬಿಜೆಪಿ ಕಾರ್ಯಕರ್ತೆಯಾಗಿದ್ದ ತನ್ನ ಮೇಲೆ ಮುನಿರತ್ನ ಅವರು ತಮ್ಮ ಸಹಚರರಿಂದ ಅವರ ಕಣ್ಣೆದುರೇ ಅತ್ಯಾಚಾರ ಮಾಡಿಸಿದ್ದರು ಎಂದು ದೂರಿದ್ದರು.

Bar & Bench

ಮಧ್ಯವಯಸ್ಸಿನ ಮಹಿಳೆಯೊಬ್ಬರ ಮೇಲೆ ತನ್ನ ಸಹಚರರಿಂದ ಕಣ್ಣೆದುರೇ ಅತ್ಯಾಚಾರ ಮಾಡಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಈ ಕುರಿತಂತೆ ಮುನಿರತ್ನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅರ್ಜಿ ವಜಾಗೊಳಿಸಿ ಗುರುವಾರ ಆದೇಶಿಸಿದರು.

ಸಂತ್ರಸ್ತೆಯ ಪರ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು, ಮುನಿರತ್ನ ಅವರು ಸಂತ್ರಸ್ತೆಗೆ ಬೆದರಿಕೆ ಒಡ್ಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ವಿವರವನ್ನು ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಆ ವೇಳೆ, ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ ಎಸ್‌ ಪ್ರದೀಪ್ ಅವರು “ಆರೋಪಿ ಮುನಿರತ್ನ ಸಂತ್ರಸ್ತೆಗೆ ಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಕೇಸ್ ಡೈರಿ ಹಾಗೂ ಇತರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಮಯಾವಕಾಶ ನೀಡಬೇಕು” ಎಂದು ಕೋರಿದ್ದರು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮುನಿರತ್ನ ಪರ ವಕೀಲ ಎಸ್‌ ಎಸ್ ಶ್ರೀನಿವಾಸ ರಾವ್‌ ಹಾಗೂ ಉಳಿದ ಆರೋಪಿಗಳ ಪರ ಹಿರಿಯ ವಕೀಲ ಎಸ್‌ ಶ್ಯಾಮಸುಂದರ್ ಅವರು “ಮಧ್ಯಂತರ ಜಾಮೀನು ಅರ್ಜಿಯನ್ನು ಈಗಲೇ ಪರಿಗಣಿಸಬೇಕು” ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದ್ದರು.

ಸಂತ್ರಸ್ತೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು “ಸಿಆರ್‌ಪಿಸಿ ಸೆಕ್ಷನ್‌ 438 (1)(4)ರ ಅಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಪ್ರಾಸಿಕ್ಯೂಟರ್‌ಗೆ ನೋಟಿಸ್ ನೀಡುವ ಪೂರ್ವದಲ್ಲಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಬಹುದಾಗಿದೆ. ಪ್ರಾಸಿಕ್ಯೂಟರ್‌ಗೆ ನೋಟಿಸ್ ನೀಡಿದ ಬಳಿಕ ಮಧ್ಯಂತರ ಆದೇಶ ಮಾಡಲು ಕಾನೂನು ಅನುಮತಿಸುವುದಿಲ್ಲ” ಎಂದು ವಾದಿಸಿದ್ದರು.

ಹಿನ್ನೆಲೆ: ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆಯು ಮೇ 20ರಂದು ದೂರು ದಾಖಲಿಸಿದ್ದರು. ದೂರಿನಲ್ಲಿ ಬಿಜೆಪಿ ಕಾರ್ಯಕರ್ತೆಯಾಗಿದ್ದ 40 ವರ್ಷದ ತನ್ನ ಮೇಲೆ ಮುನಿರತ್ನ ಅವರು ತಮ್ಮ ಸಹಚರರಿಂದ 2023ರ ಜೂನ್‌ 11ರಂದು ಅವರ ಕಣ್ಣೆದುರು ಅತ್ಯಾಚಾರ ಮಾಡಿಸಿದ್ದಾರೆ. ಅತ್ಯಾಚಾರದ ನಂತರ ಬಾಯಿಗೆ ಮೂತ್ರ ವಿಸರ್ಜಿಸಿದ್ದಾರೆ ಮತ್ತು ಜೀವನ ಪರ್ಯಂತ ನರಳುವಂತಹ ಅಪಾಯಕಾರಿ ಚುಚ್ಚುಮದ್ದೊಂದನ್ನು ಕೊಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಸಂತ್ರಸ್ತೆಯು ಒಟ್ಟು ಐವರ ವಿರುದ್ಧ ಆರ್‌ಎಂಸಿ ಠಾಣೆಗೆ ದೂರು ನೀಡಿದ್ದರು. ಈ ಕ್ರಿಮಿನಲ್ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿಸಿ ಮುನಿರತ್ನ ಮತ್ತು ನಂದಿನಿ ಲೇ ಔಟ್‌ನ ವಸಂತ, ಚನ್ನಕೇಶವ, ಆಶ್ರಯ ನಗರದ ಕಮಲ್‌ ಹಾಗೂ ಅನಾಮಧೇಯ ವ್ಯಕ್ತಿಯೊಬ್ಬನನ್ನು ಹೆಸರಿಸಲಾಗಿದೆ. ದೂರಿನ ಅನ್ವಯ ಐಪಿಸಿ ಸೆಕ್ಷನ್‌ಗಳಾದ 376 ಡಿ, 270, 323, 354, 504, 506,509 ಹಾಗೂ 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.