K S Lingesh 
ಸುದ್ದಿಗಳು

ಮಾಜಿ ಶಾಸಕ ಲಿಂಗೇಶ್‌ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ಬೇಲೂರು ತಾಲ್ಲೂಕು ಬಗರ್‌ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದ ಆರೋಪಿ ಮಾಜಿ ಶಾಸಕ ಲಿಂಗೇಶ್‌ 750 ಎಕರೆಗಿಂತ ಹೆಚ್ಚಿನ ಸರ್ಕಾರಿ ಜಮೀನಿ‌ನ ಅನುದಾನವನ್ನು ಅನುಮೋದಿಸಿದ್ದಾರೆ ಎಂಬುದು ಆರೋಪ.

Bar & Bench

ಬಗರ್‌ ಹುಕುಂ ಸಾಗುವಳಿ ಭೂ ಮಂಜೂರಾತಿ ಅಕ್ರಮ ಆರೋಪದಡಿ ಹಾಸನ ಜಿಲ್ಲೆಯ ಬೇಲೂರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಜೆಡಿಎಸ್‌ನ ಮಾಜಿ ಶಾಸಕ ಕೆ ಎಸ್‌ ಲಿಂಗೇಶ್‌ ಸೇರಿ ಒಂಭತ್ತು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.

ನಿರೀಕ್ಷಣಾ ಜಾಮೀನು ಕೋರಿದ್ದ ಆರೋಪಿಗಳ ಮನವಿ ಆಲಿಸಿದ್ದ ನ್ಯಾಯಾಧೀಶ ಸಂತೋಷ ಗಜನಾನ ಭಟ್‌ ಅರ್ಜಿ ತಿರಸ್ಕರಿಸಿ ಆದೇಶಿಸಿದ್ದಾರೆ.

ನಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ಬಗರ್‌ ಹುಕುಂ ಸಾಗುವಳಿ ಸಮಿತಿ ಮಾಜಿ ಅಧ್ಯಕ್ಷ ಕೆ ಎಸ್‌ ಲಿಂಗೇಶ್‌ ಮತ್ತಿತರರು ಈ ಮೊದಲು, ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿ ತಿರಸ್ಕರಿಸಿತ್ತು.

ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಕೆ ಎಸ್‌ ಲಿಂಗೇಶ್‌, ಶೈಲಾ ಮೋಹನ್‌, ಪರ್ವತ ಗೌಡ, ಈಶ್ವರ ಪ್ರಸಾದ್‌, ಬಿ ಆರ್ ರಂಗನಾಥ್‌, ಜಿ ಕೆ ಕುಮಾರ್, ಟಿ ಆರ್‌ ರಮೇಶ್‌, ಎಂ ಆರ್ ಚೇತನ ಮತ್ತು ಎಸ್‌ ಎನ್‌ ಲಿಂಗೇಶ್‌ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ: ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಜಮೀನನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಿತ್ತು. ಇದರನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. 

ಬೇಲೂರು ತಾಲ್ಲೂಕು ಬಗರ್‌ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದ ಮೊದಲ ಆರೋಪಿ ಮಾಜಿ ಶಾಸಕ ಲಿಂಗೇಶ್‌ 750 ಎಕರೆಗಿಂತ ಹೆಚ್ಚಿನ ಸರ್ಕಾರಿ ಜಮೀನಿ‌ನ ಅನುದಾನವನ್ನು ಅನುಮೋದಿಸಿದ್ದಾರೆ. ಉಳಿದ ಆರೋಪಿಗಳೆಲ್ಲರೂ ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಲು ಸಹಕಾರ ‌ನೀಡಿದ್ದ, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ನಡೆಸಿದ್ದಾರೆ. ಮಾಜಿ ಶಾಸಕ ವೈ ಎನ್‌ ರುದ್ರೇಶ್‌ ಗೌಡ ಅವರೂ ಅಕ್ರಮ ವಹಿವಾಟಿನ ಭಾಗವಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.