BJP MLA Muniratna and Bengaluru City Civil Court 
ಸುದ್ದಿಗಳು

ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನ ನಿರೀಕ್ಷಣಾ ಜಾಮೀನು ಆದೇಶ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

"ಮುನಿರತ್ನ ಎಂಥವರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ತಾವೊಬ್ಬ ಸಾಚಾ ಎಂದು ಬಿಂಬಿಸಿಕೊಂಡರೆ ಅದನ್ನೆಲ್ಲಾ ನಂಬಲಾಗದು” ಎಂದು ಹಳೆಯ ಪ್ರಕರಣಗಳನ್ನು ಉಲ್ಲೇಖಿಸಿದ ಸಂತ್ರಸ್ತೆಯ ಪರ ಹಿರಿಯ ವಕೀಲರಾದ ಸಿ ಎಚ್‌ ಹನುಮಂತರಾಯ.

Bar & Bench

ಉತ್ತರ ಕರ್ನಾಟಕದ ದಲಿತ ಕುಟುಂಬಗಳು ಪೀಣ್ಯದ ಕಾಲೇಜೊಂದರ ಸಮೀಪ ಹಾಕಿಕೊಂಡಿದ್ದ ಶೆಡ್‌ಗಳನ್ನು ನಾಶಪಡಿಸಿ, ಅವರ ಮೇಲೆ ಹಲ್ಲೆ ಮಾಡಿ ನಿಂದಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರ ನಿರೀಕ್ಷಣಾ ಜಾಮೀನು ಅರ್ಜಿ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಕಾಯ್ದಿರಿಸಿದೆ.

ಮಾದಿಗ ಸಮುದಾಯದ 20 ವರ್ಷದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಮುನಿರತ್ನ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ನಡೆಸಿದರು.

ಸಂತ್ರಸ್ತೆ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರು “ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಚರಿತ್ರೆಯ ತುಂಬಾ ಆಘಾತಕಾರಿ ಅಧ್ಯಾಯಗಳಿವೆ. ಪೀಣ್ಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿ ಪ್ರದೇಶವನ್ನು ಮುನಿರತ್ನ ಮತ್ತು ಅವರ ಬೆಂಬಲಿಗರು ಬಲವಂತದಿಂದ ತೆರವುಗೊಳಿಸಿ ಪುನರ್ವಸತಿ ಕೇಳಿದವರ ವಿರುದ್ಧ ಅಮಾನವೀಯವಾಗಿ ವರ್ತಿಸಿದ್ದಾರೆ. ಮುನಿರತ್ನ ಎಂಥವರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ತಾವೊಬ್ಬ ಸಾಚಾ ಎಂದು ಪ್ರತಿಬಿಂಬಿಸಿಕೊಂಡರೆ ಅದನ್ನೆಲ್ಲಾ ನಂಬಲಾಗದು” ಎಂದರು.

“ಮುನಿರತ್ನ ಮತ್ತು ಅವರ ಬೆಂಬಲಿಗರು ಬಡವರನ್ನು, ಹೆಣ್ಣು ಮಕ್ಕಳನ್ನು ಗುಡಿಸಲುಗಳಿಂದ ರಾತ್ರೋರಾತ್ರಿ ಹೊರ ಹಾಕಿದ್ದಾರೆ. ಇಂತಹ ಕುಕೃತ್ಯಗಳನ್ನು ಮುನಿರತ್ನ ಮಾಡಿಕೊಂಡೇ ಬಂದವರು. ತಮ್ಮ ಮೇಲೆ ಆಪಾದನೆಗಳು ಬಂದಾಗಲೆಲ್ಲಾ ಅವುಗಳಿಂದ ಹೊರ ಬರುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಪ್ರತಿ ಘಟನೆಯಲ್ಲೂ ಹಿಂದಿನ ಅನುಭವಗಳ ಆಧಾರದಲ್ಲಿ ತುಂಬಾ ಹುಷಾರಾಗಿ ವರ್ತಿಸುತ್ತಾರೆ” ಎಂದು ದೂರಿದರು.

“ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆಯ ಅವಶ್ಯಕತೆಯೇ ಇಲ್ಲ. ಒಕ್ಕಲೆಬ್ಬಿಸಿದವರಿಗೆ ಪೂರ್ವಭಾವಿಯಾಗಿ ನೋಟಿಸ್‌ ನೀಡಿಲ್ಲ. ಸೂಕ್ತ ಪುನರ್ವಸತಿ ಕಲ್ಪಿಸಿಲ್ಲ. ವಾಸ್ತವದಲ್ಲಿ ಇದು (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ) ಬಿಬಿಎಂಪಿ ನಡೆಸಿರುವ ಕಾರ್ಯಾಚರಣೆಯೇ ಅಲ್ಲ. ಮುನಿರತ್ನ ಸುತ್ತಮುತ್ತ ಇರುವ ಮಾಜಿ ಕಾರ್ಪೊರೇಟರ್‌ಗಳು ಮತ್ತು ಟಿಕೆಟ್‌ ಆಕಾಂಕ್ಷಿಗಳು. ಈ ತಂಡದಿಂದ ಮುನಿರತ್ನ ನಡೆಸಿರುವ ದುಷ್ಕತ್ಯವಿದು. ಆದಾಗ್ಯೂ, ಸತ್ಯ ಹೊರಗೆಳೆಯುತ್ತೇನೆ ಎಂದು ಈ ಹೆಣ್ಣು ಮಗಳು ಧೈರ್ಯ ಮಾಡಿ ದೂರು ಕೊಟ್ಟಿದ್ದಾರೆ. ಹೀಗಾಗಿ, ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು” ಎಂದು ಮನವಿ ಮಾಡಿದರು.

ಮುನಿರತ್ನ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು “ಇದರಲ್ಲಿ ಮುನಿರತ್ನ ಪಾತ್ರವೇ ಇಲ್ಲ. ಇದೆಲ್ಲಾ ಬಿಬಿಎಂಪಿ ಕಾನೂನುಬದ್ಧವಾಗಿ ನಡೆಸಿರುವ ಕಾರ್ಯಾಚರಣೆ. ಇದಕ್ಕೆ ಪತ್ರಿಕಾ ವರದಿಗಳೇ ಸಾಕ್ಷಿ. ಸದ್ಯ ಪಾಲಿಕೆಯಲ್ಲಿ ಕಾರ್ಪೋರೇಟರ್‌ಗಳು ಇಲ್ಲ. ಅಧಿಕಾರಿಗಳೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಮುನಿರತ್ನ ವಿರುದ್ಧ ರೂಪಿಸಿರುವ ರಾಜಕೀಯ ಪ್ರೇರಿತ ದೂರಿದು. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು” ಎಂದು ಕೋರಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದರು. ಅಂತೆಯೇ, ಮುನಿರತ್ನ ವಿರುದ್ಧ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಆದೇಶವನ್ನು ವಿಸ್ತರಿಸಿದರು. ಸಿಐಡಿ ಪರ ಪ್ರಾಸಿಕ್ಯೂಟರ್ ಝೈದಾ ಬಾನು ಖಾಜಿ ಆಕ್ಷೇಪಣೆ ಸಲ್ಲಿಸಿದರು.

ಪ್ರಕರಣದ ಹಿನ್ನೆಲೆ: ಪೀಣ್ಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್‌ ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದ 60ರಿಂದ 70ರಷ್ಟು ಉತ್ತರ ಕರ್ನಾಟಕದ ದಲಿತ ಕುಟುಂಬಗಳನ್ನು ಜನವರಿ 20ರಂದು ಮುನಿರತ್ನ ಮತ್ತು ಬೆಂಬಲಿಗರಾದ ವಸಂತಕುಮಾರ್, ಚನ್ನಕೇಶವ, ಗೊರಗುಂಟೆಪಾಳ್ಯದ ನವೀನ, ಶ್ರೀರಾಮ, ಪೀಣ್ಯದ ಕಿಟ್ಟಿ, ಗಂಗಾ ಮತ್ತು ಇತರರು ಕಾನೂನು ಬಾಹಿರವಾಗಿ ಜೆಸಿಬಿ ತಂದು ತೆರವುಗೊಳಿಸಿದ್ದಾರೆ. ಅಂತೆಯೇ, ನನಗೆ ಜಾತಿನಿಂದನೆ ಮಾಡಿ ಅಲ್ಲಿದ್ದ ಕೆಲ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರ ಎದೆಗೆ ಮುನಿರತ್ನ ಒದ್ದಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಜನವರಿ 20ರಂದು ದೂರು ನೀಡಿದ್ದರು.

ಈ ದೂರಿನ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ ಸೆಕ್ಷನ್‌ಗಳಾದ 324(2), 74, 351(2), 351(3) ಮತ್ತು 190 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ–2014ರ ಸೆಕ್ಷನ್‌ 3(1), ಆರ್‌(ಎಸ್‌) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.