ಅಕ್ರಮವಾಗಿ ಅದಿರು ಸಾಗಣೆ, ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಎಸಗಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದ ಆರು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕರೂ ಆದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಕೃಷ್ಣ ಸೈಲ್ ಅಲಿಯಾಸ್ ಸತೀಶ್ ಸೈಲ್ ಹಾಗೂ ಪ್ರಕರಣದಲ್ಲಿ ಮೊದಲನೇ ಆರೋಪಿ ಮಹೇಶ್ ಜೆ. ಬಿಳಿಯೆ ಅವರನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಗುರುವಾರ ದೋಷಿಗಳು ಎಂದು ತೀರ್ಪು ಪ್ರಕಟಿಸಿದೆ.
ಪ್ರತ್ಯೇಕ ಪ್ರಕರಣಗಳಲ್ಲಿ ಉಳಿದ ನಾಲ್ವರನ್ನೂ ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದ್ದು, ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಹೇಳಿದ್ದಾರೆ. ಶಿಕ್ಷೆಯ ಪ್ರಮಾಣ ನಿರ್ಧರಿಸುವವರೆಗೆ ಎಲ್ಲಾ ಆರೋಪಿಗಳನ್ನು ಕಸ್ಟಡಿಗೆ ಪಡೆಯುವಂತೆ ಸಿಬಿಐಗೆ ನ್ಯಾಯಾಲಯ ಆದೇಶಿಸಿದೆ.
ಆರೂ ಕ್ರಿಮಿನಲ್ ಪ್ರಕರಣಗಳಲ್ಲಿ ಮೊದಲನೇ ಆರೋಪಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್ ಅವರನ್ನು ಐಪಿಸಿ ಸೆಕ್ಷನ್‌ಗಳಾದ 120-ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ), 379 (ಕಳವು) ಅಡಿ ದೋಷಿಗಳು ಎಂದು ತೀರ್ಮಾನಿಸಲಾಗಿದೆ. ಮಹೇಶ್ ಜೆ. ಬಿಳೆಯೆ ಸರ್ಕಾರಿ ಅಧಿಕಾರಿಯಾಗಿರುವುದರಿಂದ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13(2) ಜೊತೆಗೆ 13(1)(c) ಮತ್ತು (d) ಅಡಿ ಎಲ್ಲಾ ಪ್ರಕರಣಗಳಲ್ಲೂ ದೋಷಿ ಎಂದು ತೀರ್ಮಾನಿಸಲಾಗಿದೆ. ಇನ್ನು ಮೊದಲ ಪ್ರಕರಣದಲ್ಲಿ ಪಿಜೆಸ್ ಓವರ್‌ಸೀಸ್ ಲಿಮಿಟೆಡ್ ಕಂಪನಿಯೂ ದೋಷಿ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಎರಡನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಆಶಾಪುರ ಮಿನೆಚೆಮ್ ಲಿಮಿಟೆಡ್ ಮತ್ತು ಅದರ ಮಾಲೀಕ ಚೇತನ್ ಶಾ ಮತ್ತು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್; ಮೂರನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್; ನಾಲ್ಕನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಸ್ವಸ್ತಿಕ್ ಸ್ಟೀಲ್ಸ್ (ಹೊಸಪೇಟೆ) ಪ್ರೈ. ಲಿ ಮತ್ತು ಅದರ ಮಾಲೀಕರಾದ ಕೆ ವಿ ನಾಗರಾಜ್ ಹಾಗೂ ಕೆ ವಿ ಎನ್ ಗೋವಿಂದರಾಜ್ ಮತ್ತು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್; ಐದನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಮಾಲೀಕ ಕೆ ಮಹೇಶ್ ಕುಮಾರ್ ಅಲಿಯಾಸ್ ಖಾರದಪುಡಿ ಮಹೇಶ್, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್; ಆರನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಲಾಲ್ ಮಹಲ್ ಲಿಮಿಟೆಡ್ ಮತ್ತು ಅದರ ಮಾಲೀಕ ಪ್ರೇಮ್ ಚಂದ್ ಗರ್ಗ್ ಮತ್ತು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್ ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ. ಎಲ್ಲಾ ಪ್ರಕರಣಗಳಲ್ಲಿ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಅದಿರು ಕಳವು ಆರೋಪ ಸಾಬೀತಾಗಿದೆ.
ಕಂಪನಿಗಳನ್ನು ದೋಷಿ ಎಂದಿರುವ ಕಡೆ ಅದರ ಪ್ರತಿನಿಧಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಹೇಳಿರುವ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸುವಾಗ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ದೂರು ದಾಖಲಿಸಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. 2014ರಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಈಗ ದಶಕದ ಬಳಿಕ ತೀರ್ಪು ಪ್ರಕಟವಾಗಿದೆ.
ಪ್ರಕರಣದ ಆರೋಪಿಗಳಾಗಿದ್ದ ಕೆಲವರು ಅದಿರನ್ನು ನೇರವಾಗಿ ವಿದೇಶಗಳಿಗೆ ರಫ್ತು ಮಾಡಿದ್ದರೆ, ಇನ್ನು ಕೆಲವರು ಸತೀಶ್ ಸೈಲ್ ಕಂಪನಿಗೆ ಕಡಿಮೆ ದರಕ್ಕೆ ಮಾರಾಟ ಮಾಡಿದ್ದು ಮತ್ತು ಕೆಲವರು ನೇರವಾಗಿ ಚೀನಾ ಸೇರಿದಂತೆ ಹಲವು ವಿದೇಶಗಳಿಗೆ ರಫ್ತು ಮಾಡಿದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣದಲ್ಲಿ 2010ರ ಅಂದಾಜಿನಂತೆ ಒಟ್ಟು ₹ 200 ಕೋಟಿಯಷ್ಟು ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ವಿವರಿಸಿತ್ತು.
ಸಿಬಿಐ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಿವಾನಂದ ಪೆರ್ಲ ಮತ್ತು ಕೆ ಎಸ್ ಹೇಮಾ ವಾದಿಸಿದ್ದರು.