ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅಲಿಯಾಸ್ ಹರ್ಷವರ್ದಿನಿ ರನ್ಯಾ ಅವರನ್ನು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ಸೋಮವಾರ 15 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಮೂರು ದಿನಗಳ ಕಸ್ಟಡಿ ಅವಧಿಯು ಇಂದು ಮುಗಿದ ಹಿನ್ನೆಲೆಯಲ್ಲಿ ಆಕೆಯನ್ನು ಅಧಿಕಾರಿಗಳು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ್ ಚನ್ನಬಸಪ್ಪ ಗೌಡರ್ ಅವರ ಮುಂದೆ ಹಾಜರುಪಡಿಸಿದರು.
ತನಿಖಾಧಿಕಾರಿಗಳಿಂದ ಮಾಹಿತಿ ಪಡೆದ ನ್ಯಾಯಾಧೀಶರು ರನ್ಯಾರನ್ನು ಮಾರ್ಚ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಮಾರ್ಚ್ 7ರಂದು ನ್ಯಾಯಾಲಯವು ರನ್ಯಾರನ್ನು ಮೂರು ದಿನ ಡಿಆರ್‌ಐ ಕಸ್ಟಡಿಗೆ ನೀಡಿತ್ತು.
ಈ ಮಧ್ಯೆ, ರನ್ಯಾ ರಾವ್ ಸ್ನೇಹಿತ ಎನ್ನಲಾದ ಸ್ಟಾರ್ ಹೋಟೆಲ್ ಮಾಲೀಕರೊಬ್ಬರ ಮೊಮ್ಮಗ ತರುಣ್ ರಾಜ್ ಎಂಬಾತನನ್ನು ಡಿಆರ್‌ಐ ಅಧಿಕಾರಿಗಳು ಐದು ದಿನ (ಮಾರ್ಚ್ 15ರವರೆಗೆ) ಕಸ್ಟಡಿಗೆ ಪಡೆದಿದ್ದಾರೆ.
ಬಂಧಿತ ತರುಣ್ ಕೊಂಡೂರು ರಾಜ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಅಧಿಕಾರಿಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ದುಬೈನಲ್ಲಿ ತರುಣ್ ರಾಜ್ ರನ್ಯಾ ಜೊತೆ ಓಡಾಟ ನಡೆಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.