Bangalore City civil court and B S Yediyurappa 
ಸುದ್ದಿಗಳು

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಬಿಎಸ್‌ವೈಗೆ ವಿಶೇಷ ನ್ಯಾಯಾಲಯದಿಂದ ಸಮನ್ಸ್‌ ಜಾರಿ; ಹೊಸದಾಗಿ ಪ್ರಕರಣ ಪರಿಗಣನೆ

ಆರೋಪ ಮತ್ತು ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವಿಸ್ತೃತವಾಗಿ ಆದೇಶದಲ್ಲಿ ದಾಖಲಿಸಿದ ನ್ಯಾಯಾಲಯವು ಸಂಜ್ಞೇ ಪರಿಗಣಿಸಿ ಆದೇಶಿಸಿತು. ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿ, ಮಾ.15ರಂದು ವಿಚಾರಣೆಯಲ್ಲಿ ಭಾಗಿಯಾಗಲು ನಿರ್ದೇಶಿಸಿತು.

Bar & Bench

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಇತರೆ ಆರೋಪಿಗಳ ವಿರುದ್ದ ಬೆಂಗಳೂರಿನ ವಿಶೇಷ ಪೋಕ್ಸೊ ನ್ಯಾಯಾಲಯವು ಸಂಜ್ಞೇ ಪರಿಗಣಿಸಿದ್ದು, ಮಾರ್ಚ್‌ 15ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

ವಿಶೇಷ ನ್ಯಾಯಾಲಯವು ಈ ಹಿಂದೆ ಸಂಜ್ಞೇ ಪರಿಗಣಿಸಿದ್ದನ್ನು ಹೈಕೋರ್ಟ್‌ ಬದಿಗೆ ಸರಿಸಿ, ಹೊಸದಾಗಿ ಸಂಜ್ಞೇ ಪರಿಗಣಿಸಲು ಆದೇಶಿಸಿತ್ತು. ಇದರ ಭಾಗವಾಗಿ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ (ಮೊದಲನೇ ತ್ವರಿತ ವಿಶೇಷ ನ್ಯಾಯಾಲಯ) ನ್ಯಾಯಾಧೀಶ ಎನ್‌ ಎಂ ರಮೇಶ್‌ ಅವರು ಹೊಸದಾಗಿ ಸಂಜ್ಞೇ ಪರಿಗಣಿಸಿದರು.

ಆರೋಪಗಳು ಮತ್ತು ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅವುಗಳನ್ನು ವಿಸ್ತೃತವಾಗಿ ಆದೇಶದಲ್ಲಿ ದಾಖಲಿಸಿದ ನ್ಯಾಯಾಲಯವು ಸಂಜ್ಞೇ ಪರಿಗಣಿಸಿ ಆದೇಶಿಸಿತು. ಅಲ್ಲದೇ, ಬಿಎಸ್‌ವೈ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ 8, ಐಪಿಸಿ ಸೆಕ್ಷನ್‌ಗಳಾದ 354(ಎ), 204, 214 ಜೊತೆಗೆ 34ರ ಅಡಿ ವಿಶೇಷ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಮತ್ತು ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿ, ಮಾರ್ಚ್‌ 15ರಂದು ವಿಚಾರಣೆಯಲ್ಲಿ ಭಾಗಿಯಾಗಲು ನಿರ್ದೇಶಿಸಿತು.

ಫೆಬ್ರವರಿ 7ರಂದು ಇದೇ ಪ್ರಕರಣದಲ್ಲಿ ಬಿಎಸ್‌ವೈಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್‌ “ಎಫ್‌ಐಆರ್‌, ಸಿಐಡಿ ತನಿಖೆ ನಡೆಸಿ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ಸಕ್ಷಮ ನ್ಯಾಯಾಲಯ 4.7.2024ರಂದು ಸಂಜ್ಞೇ ಪರಿಗಣಿಸಿರುವ ಆದೇಶ ಪ್ರಶ್ನಿಸಿದ್ದ ಬಿ ಎಸ್‌ ಯಡಿಯೂರಪ್ಪ ಅವರ ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಗಿದೆ. ಸಕ್ಷಮ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವ ಆದೇಶವನ್ನು ಯಡಿಯೂರಪ್ಪ ಅವರಿಗೆ ಸೀಮಿತವಾಗಿ ವಜಾ ಮಾಡಲಾಗಿದೆ. ಅಪರಾಧ, ತನಿಖೆ, ಅಂತಿಮ ವರದಿ ಎಲ್ಲವೂ ಹಾಗೆ ಉಳಿಯಲಿದೆ. ಈ ಆದೇಶದಲ್ಲಿ ಮಾಡಿರುವ ಅಭಿಪಾಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವರದಿಗೆ ಸಂಬಂಧಿಸಿದಂತೆ ಆದೇಶ ಮಾಡಲು ಪ್ರಕರಣವನ್ನು ಮತ್ತೆ ಸಕ್ಷಮ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ" ಎಂದು ಆದೇಶಿಸಿತ್ತು.

ಮುಂದುವರೆದು, "ಸಂಜ್ಞೇಯ ಪರಿಗಣಿಸಿರುವ ಆದೇಶ ಹೊರತುಪಡಿಸಿ ಉಭಯ ಪಕ್ಷಕಾರರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಮತ್ತು ಪ್ರೊ. ರವಿವರ್ಮ ಕುಮಾರ್‌ ಅವರು ಎತ್ತಿರುವ ಯಾವುದೇ ವಾದಗಳಿಗೆ ಈ ನ್ಯಾಯಾಲಯವು ಉತ್ತರಿಸಿಲ್ಲ. ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದ್ದು, ಅರ್ಜಿದಾರರು ಸೂಕ್ತ ಸಂದರ್ಭದಲ್ಲಿ ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬಹುದಾಗಿದೆ” ಎಂದು ಆದೇಶಿಸಿತ್ತು.

ಇದರ ಆದೇಶ ಪ್ರತಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯ್ಕ್‌ ಅವರು ಹೊಸದಾಗಿ ಸಂಜ್ಞೇ ಪರಿಗಣಿಸುವಂತೆ ಮನವಿ ಮಾಡಿದ್ದರು.

ದೂರಿನ ಸಾರಾಂಶ: ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಸಂತ್ರಸ್ತೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೆರವಾಗುವಂತೆ ಕೋರಲು ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು 2024ರ ಫೆಬ್ರವರಿ 2ರಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಮ್ಮ ಜೊತೆ ಒಂಭತ್ತು ನಿಮಿಷ ಮಾತನಾಡಿ, ನಮಗೆ ಟೀ ಕುಡಿಸಿದರು. ಆನಂತರ ನನ್ನ ಮಗಳನ್ನು ಕೊಠಡಿಗೆ ಕರೆದೊಯ್ದು ಚಿಲಕ ಹಾಕಿಕೊಂಡಿದ್ದರು. ಈ ವೇಳೆ ಆಕೆಯ ಬಲಭಾಗದ ಸ್ತನವನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಆಕೆ ಹೊರಹೋಗಲು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಳು. ಆನಂತರ ಯಡಿಯೂರಪ್ಪ ಅವರೇ ಬಾಗಿಲು ತೆರೆದಿದ್ದು, ತಕ್ಷಣ ಓಡಿ ಬಂದ ನನ್ನ ಪುತ್ರಿ ಘಟನೆಯನ್ನು ವಿವರಿಸಿದಳು ಎಂದು ದೂರಲಾಗಿತ್ತು.

ಈ ಕುರಿತು ಯಡಿಯೂರಪ್ಪ ಅವರನ್ನು ಪ್ರಶ್ನಿಸಲಾಗಿ ಅದಕ್ಕೆ ಅವರು ನಿಮ್ಮ ಮಗಳಿಗೆ ರೇಪ್‌ ಆಗಿದೆಯೋ? ಇಲ್ಲವೋ? ಎಂಬುದನ್ನು ಚೆಕ್‌ ಮಾಡಲು ಹಾಗೆ ಮಾಡಿದೆ ಎಂದರು. ತಕ್ಷಣ ನಮ್ಮ ಕ್ಷಮೆಯಾಚಿಸಿದ ಯಡಿಯೂರಪ್ಪ ಅವರು ನಿಮಗೆ ಮೋಸ ಆಗಿರುವ ಬಗ್ಗೆ ಸಹಾಯ ಮಾಡುತ್ತೇನೆ ಎಂದರು. ಇದಕ್ಕೆ ನಾನು ಒಪ್ಪಲಿಲ್ಲ. ಅದಾಗ್ಯೂ, ಯಡಿಯೂರಪ್ಪ ಅವರು ಈ ವಿಚಾರವನ್ನು ಹೊರೆಗೆ ಬಾಯಿ ಬಿಡದಂತೆ ತಡೆಯಲು ತುಂಬಾ ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಆನಂತರ ಪ್ರಕರಣದ ತನಿಖೆ ನಡೆಸಿ, ಸಿಐಡಿಯು ಆರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣಾಧೀನ ನ್ಯಾಯಾಲಯವು ಇದರ ಸಂಜ್ಞೇಯ ಪರಿಗಣಿಸಿತ್ತು. ಇದನ್ನು ಹೈಕೋರ್ಟ್‌ ವಜಾ ಮಾಡಿ, ಹೊಸದಾಗಿ ಸಂಜ್ಞೇಯ ಪರಿಗಣಿಸಲು ಆದೇಶಿಸಿತ್ತು.