Nirmala Sitaraman, J P Nadda, B Y Vijayendra, BJP & ED 
ಸುದ್ದಿಗಳು

ಇ ಡಿ ಬಳಸಿ ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಆರೋಪ: ನಿರ್ಮಲಾ, ನಡ್ಡಾ, ವಿಜಯೇಂದ್ರ ವಿರುದ್ಧ ಎಫ್‌ಐಆರ್‌ಗೆ ಆದೇಶ

ಬಹುರಾಷ್ಟ್ರೀಯ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸುಲಿಗೆ ನಡೆಸಿದ್ದು, ಅವರಿಂದ ಚುನಾವಣೆ ಬಾಂಡ್‌ ಖರೀದಿಸಿ ಬಿಜೆಪಿಗೆ ಸುಮಾರು 8,000 ಕೋಟಿಗಳಿಗೂ ಅಧಿಕ ಲಾಭ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ.

Siddesh M S

ಭಾರತೀಯ ಜನತಾ ಪಕ್ಷದ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಘಟಕಕ್ಕೆ ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ ಪಿ ನಡ್ಡಾ ವಿರುದ್ದ ಎಫ್‌ಐಆರ್‌ ದಾಖಲಿಸಲು ಬೆಂಗಳೂರಿನ ತಿಲಕ್‌ ನಗರ ಪೊಲೀಸರಿಗೆ ದೂರು ಮತ್ತು ಸಂಬಂಧಿತ ದಾಖಲೆ ಸಲ್ಲಿಸಲು ಕಚೇರಿಗೆ ನ್ಯಾಯಾಲಯ ಶುಕ್ರವಾರ ನಿರ್ದೇಶಿಸಿದೆ.

ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾಗಿರುವ ಆದರ್ಶ್‌ ಆರ್‌. ಐಯ್ಯರ್‌ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಎಫ್‌ಐಆರ್‌ ದಾಖಲಿಗೆ ಕಾಯಲಾಗುತ್ತಿದ್ದು, ವಿಚಾರಣೆಗಾಗಿ ಪ್ರಕರಣವನ್ನು ಅಕ್ಟೋಬರ್‌ 10ಕ್ಕೆ ಪಟ್ಟಿ ಮಾಡಲು ಆದೇಶಿಸಿದ್ದಾರೆ.

K N Shivakumar, Magistrate, MP/MLA Special court

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿಯ ಪದಾಧಿಕಾರಿಗಳು, ರಾಜ್ಯ ಬಿಜೆಪಿ ಹಿಂದಿನ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಮತ್ತು ಹಾಲಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳನ್ನು ಖಾಸಗಿ ದೂರಿನಲ್ಲಿ ಆರೋಪಿಗಳನ್ನಗಿಸಲಾಗಿದೆ.

ನಿರ್ಮಲಾ ಸೀತಾರಾಮನ್‌ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ನಡ್ಡಾ ಮತ್ತು ನಳೀನ್‌ ಕುಮಾರ್‌ ಕಟೀಲ್‌ ವಿಜಯೇಂದ್ರ ಹಾಗೂ ಸಾಂವಿಧಾನಿಕ ಹುದ್ದೆಯಲ್ಲಿರುವ ಹಲವರು ಹಾಗೂ ರಾಷ್ಟ್ರಮಟ್ಟದಲ್ಲಿರುವ ಹಲವು ಬಹುರಾಷ್ಟ್ರೀಯ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸುಲಿಗೆ ನಡೆಸಿದ್ದು, ಅವರ ಮುಖೇನ ಚುನಾವಣೆ ಬಾಂಡ್‌ ಖರೀದಿಸಿ ಸುಮಾರು ರೂ.8,000 ಕೋಟಿಗಳಿಗೂ ಅಧಿಕ ಲಾಭ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಹುರಾಷ್ಟ್ರೀಯ ಕಂಪೆನಿಗಳಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿ ಬೊಕ್ಕಸ ತುಂಬಿಸಿದ್ದಾರೆ. ಜಾರಿ ನಿರ್ದೇಶನಾಲಯದ ಮೇಲೆ ಹಿಡಿತ ಹೊಂದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇ ಡಿ ಅಧಿಕಾರಿಗಳನ್ನು ಬಳಸಿ ಹಲವು ಕಾರ್ಪೊರೇಟ್‌ ಕಂಪೆನಿಗಳ ಸಿಇಒ, ಎಂ ಡಿಗಳ ಮೇಲೆ ದಾಳಿಯ ಬೆದರಿಕೆ ಹಾಕಿದ್ದಾರೆ. ಇದರಿಂದ ವಿಚಲಿತರಾಗಿರುವ ಕಾರ್ಪೊರೇಟ್‌ ಕಂಪೆನಿಗಳು ಬಹುಕೋಟಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿಗೆ ದೇಣಿಗೆಯಾಗಿ ನೀಡಿವೆ. ಇವುಗಳನ್ನು ಬಿಜೆಪಿಯು ನಗದಾಗಿ ಪರಿವರ್ತಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಮೆಸರ್ಸ್‌ ಸ್ಟರ್ಲೈಟ್‌ ಮತ್ತು ವೇದಾಂತ ಕಂಪೆನಿಗಳ ಮುಖ್ಯಸ್ಥ ಅನಿಲ್‌ ಅಗರ್ವಾಲ್‌ ಅವರ ಮೇಲೆ ಹಲವು ಬಾರಿ ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದು, ಇದರಿಂದ ಕಂಗೆಟ್ಟಿದ್ದ ಅಗರ್ವಾಲ್‌ ಅವರು 2019ರ ಏಪ್ರಿಲ್‌ನಿಂದ 2022ರ ಆಗಸ್ಟ್‌ ನಡುವೆ ಮತ್ತು 2023ರ ನವೆಂಬರ್‌ನಲ್ಲಿ ಒಟ್ಟು 230.15 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ. ಇ ಡಿ ಅಧಿಕಾರಿಗಳ ದಾಳಿ ನಡೆಸಿರುವ ಕಾರ್ಪೊರೆಟ್‌ ಸಂಸ್ಥೆಗಳು ಮತ್ತು ಹೀಗೆ ದಾಳಿಗೆ ತುತ್ತಾದ ಸಂಸ್ಥೆಗಳು ಚುನಾವಣಾ ಬಾಂಡ್‌ನಿಂದ ಹಣ ಸಂಗ್ರಹಿಸಿರುವ ವಿವರವನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮೆಸರ್ಸ್‌ ಅರಬಿಂದೊ ಫಾರ್ಮಾದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ, ದಾಖಲೆಗಳನ್ನು ಜಫ್ತಿ ಮಾಡಿತ್ತು. ಇದರಿಂದ ಬೆದರಿದ್ದ ಅರಬಿಂದೊ ಫಾರ್ಮಾ ಸಮೂಹ ಸಂಸ್ಥೆಗಳು 2023ರ ಜನವರಿ 5 ಮತ್ತು ನವೆಂಬರ್‌ 8, 2022ರ ಜುಲೈ 2, 2022ರ ನವೆಂಬರ್ 15ರಂದು ಒಟ್ಟು 49.5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ರೀತಿ, ಅರಬಿಂದೊ ಫಾರ್ಮಾದ ಮೇಲಿನ ದಾಳಿಯ ವಿವರವನ್ನೂ ಅರ್ಜಿದಾರರು ನ್ಯಾಯಾಲಯಕ್ಕೆ ದಾಖಲೆಯಲ್ಲಿ ಲಗತ್ತಿಸಿದ್ದಾರೆ. ಇ ಡಿ ದಾಳಿಗೆ ಬೆದರಿದ ಅರಬಿಂದೊ ಫಾರ್ಮಾವು ಅಪ್ರೂವರ್ ಆಗಲು ಒಪ್ಪಿತ್ತು. ‌

ನಿರ್ಮಲಾ ಸೀತಾರಾಮನ್‌, ಜಾರಿ ನಿರ್ದೇಶನಾಲಯ, ಜೆ ಪಿ ನಡ್ಡಾ, ನಳೀನ್‌ ಕುಮಾರ್‌ ಕಟೀಲ್‌ ಮತ್ತು ಬಿ ವೈ ವಿಜಯೇಂದ್ರ ಅವರು ಹಲವು ಮಟ್ಟದಲ್ಲಿ ಗುಪ್ತವಾಗಿ ಪಿತೂರಿ ನಡೆಸಿದ್ದು, ಚುನಾವಣಾ ಬಾಂಡ್‌ ನೆಪದಲ್ಲಿ ಬಹುಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ. ಅಲ್ಲದೇ, ಅರಬಿಂದೊ ಫಾರ್ಮಾದ ನಿರ್ದೇಶಕರೊಬ್ಬರು ಅಪ್ರೂವರ್‌ ಆಗಿದ್ದರಿಂದ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್‌ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಲಾಯಿತು ಎಂದು ಅರ್ಜಿದಾರರು ವಿವರಿಸಿದ್ದಾರೆ.

ಚುನಾವಣಾ ಬಾಂಡ್‌ ಕುರಿತು ಲೋಕಸಭಾ ಚುನಾವಣೆಗೂ ಮುನ್ನ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಹೊರಡಿಸಿದ್ದು, ಹಲವು ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣಾ ಬಾಂಡ್‌ ಸಂಬಂಧಿತ ವಿಚಾರ, ವಾಸ್ತವಿಕ ಅಂಶಗಳು ಕಾನೂನು ಜಾರಿ ಸಂಸ್ಥೆಗಳ (ಚುನಾವಣಾ ಆಯೋಗ) ವ್ಯಾಪ್ತಿಯಲ್ಲಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.

ಈ ಸಂಬಂಧ 30.03.2024ರಂದು ತಿಲಕ್‌ ನಗರ ಠಾಣಾಧಿಕಾರಿಗೆ ಆನಂತರ 02.04.2024ರಂದು ಬೆಂಗಳೂರು ದಕ್ಷಿಣದ ಡಿಸಿಪಿಗೆ ದೂರು ನೀಡಲಾಗಿತ್ತು. ಅವರು ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ಅಧಿಕಾರಿಗಳು ದೂರು ಸ್ವೀಕರಿಸದೇ ತಮ್ಮನ್ನು ಹೇಗೆ ಕಚೇರಿಯಿಂದ ಕಚೇರಿಗೆ ಅಲೆಸಿದ್ದಾರೆ ಎಂಬುದರ ಸವಿವರವಾದ ಅಫಿಡವಿಟ್‌ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಹಲವು ತೀರ್ಪುಗಳಲ್ಲಿ ಮ್ಯಾಜಿಸ್ಟ್ರೇಟ್‌ ಸಕ್ಷಮ ಪ್ರಾಧಿಕಾರದಿಂದ ಸಿಆರ್‌ಪಿಸಿ ಸೆಕ್ಷನ್‌ 197 ಅನ್ವಯ ಪೂರ್ವಾನುಮತಿ ಪಡೆಯದಿದ್ದರೂ ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ಆದೇಶಿಸಬಹುದು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇದರ ಅನ್ವಯ ನಿರ್ಮಲಾ ಸೀತಾರಾಮನ್‌, ಜೆ ಪಿ ನಡ್ಡಾ, ನಳೀನ್‌ ಕುಮಾರ್‌ ಕಟೀಲ್‌, ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 384 (ಸುಲಿಗೆ), 120ಬಿ (ಕ್ರಿಮಿನಲ್‌ ಪಿತೂರಿ) ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲು ತಿಲಕ್‌ ನಗರ ಪೊಲೀಸರಿಗೆ ಆದೇಶಿಸಬೇಕು ಎಂದು ಕೋರಿದ್ದಾರೆ. ಇದರಂತೆ ಈಗ ನ್ಯಾಯಾಲಯವು ಎಫ್‌ಐಆರ್‌ ದಾಖಲಿಸಲು ದೂರು ಮತ್ತು ಸಂಬಂಧಿತ ದಾಖಲೆಗಳನ್ನು ತಿಲಕ್‌ ನಗರ ಪೊಲೀಸರಿಗೆ ರವಾನಿಸಲು ಕಚೇರಿಗೆ ಆದೇಶಿಸಿದೆ. ಅಲ್ಲದೇ, ಎಫ್‌ಐಆರ್‌ಗೆ ಕಾಯಲಾಗುತ್ತಿದೆ ಎಂದು ಅರ್ಜಿ ವಿಚಾರಣೆ ಮುಂದೂಡಿದೆ.