Narcotics Control Bureau
Narcotics Control Bureau 
ಸುದ್ದಿಗಳು

ನಟಿ ರಿಯಾ, ಶೌವಿಕ್ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌‌ಡಿಪಿಎಸ್‌ ವಿಶೇಷ ನ್ಯಾಯಾಲಯ

Bar & Bench

ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ಅವರ ಮನೆಯ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ, ಅಬ್ಡೆಲ್ ಬಸಿತ್ ಪರಿಹಾರ್ ಮತ್ತು ಜೈದ್ ವಿಲಾತ್ರ ಅವರ ಜಾಮೀನು ಅರ್ಜಿಯನ್ನು ಮುಂಬೈನಲ್ಲಿರುವ ಮಾದಕ ವಸ್ತು ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ ಉಲ್ಲಂಘನೆ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ.

ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಪ್ರತಿಕ್ರಿಯಿಸಿರುವ ರಿಯಾ ಪರ ವಕೀಲ ಸತೀಶ್ ಮನೀಶಿಂಧೆ ಅವರು, “ಆದೇಶದ ಪ್ರತಿ ನಮಗೆ ಸಿಕ್ಕ ಬಳಿಕ ಮುಂದಿನ ವಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರುವ ಕಾರ್ಯಯೋಜನೆ ಕುರಿತು ನಿರ್ಧರಿಸುತ್ತೇವೆ” ಎಂದಿದ್ದಾರೆ.

ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಮತ್ತು ಇತರರನ್ನು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿತ್ತು. ತನಿಖಾ ಸಂಸ್ಥೆಯ ಬಲವಂತದಿಂದಾಗಿ ತಪ್ಪೊಪ್ಪಿಕೊಂಡಿದ್ದು, ಅದರಿಂದ ಹಿಂದೆ ಸರಿಯುವುದಾಗಿ ರಿಯಾ ಬಳಿಕ ಹೇಳಿದ್ದರು.

ಆರೋಪಿತರನ್ನು 14 ದಿನ ತನ್ನ ವಶಕ್ಕೆ ನೀಡುವಂತೆ ಕೋರುವ ಸಂದರ್ಭದಲ್ಲಿ ಎನ್‌ಸಿಬಿಯು ಗಾಂಜಾ, ಹಶಿಶ್ ಮತ್ತಿತರ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಅವುಗಳ ಖರೀದಿಗೆ ಹಣ ಪಾವತಿಸುವ ವಿಚಾರ ರಿಯಾ ಚಕ್ರವರ್ತಿ ಅವರಿಗೆ ಗೊತ್ತಿತ್ತು ಎಂದು ಹೇಳಿತ್ತು.

ಸುಶಾಂತ್ ಸಿಂಗ್ ರಜಪೂತ್‌ಗೆ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ ರಿಯಾ ಚಕ್ರವರ್ತಿಯನ್ನು ಕಳೆದ ಸೋಮವಾರ ಬಂಧಿಸಲಾಗಿತ್ತು. ಎನ್‌ಡಿಪಿಎಸ್ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಿಯಾ ವಿರುದ್ಧ ದೂರು ದಾಖಲಿಸಲಾಗಿದೆ. ರಿಯಾ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್, ರಿಯಾ ಅವರನ್ನು ಸೆಪ್ಟೆಂಬರ್ 22ರಂದು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಮುಂಬೈನ ಬೈಕುಲ್ಲಾ ಜೈಲಿನಲ್ಲಿ ರಿಯಾ ಚಕ್ರವರ್ತಿ ಅವರನ್ನು ಇಡಲಾಗಿದೆ ಎಂದು ವರದಿಯಾಗಿತ್ತು.