Indian Army women, Supreme Court 
ಸುದ್ದಿಗಳು

ಕರ್ನಲ್ ಶ್ರೇಣಿಗೆ ಬಡ್ತಿ ನೀಡಲು 246 ಮಹಿಳಾ ಅಧಿಕಾರಿಗಳ ಪರಿಗಣನೆ: ಸುಪ್ರೀಂ ಕೋರ್ಟ್‌ಗೆ ಸೇನೆ ವಿವರಣೆ

ಬಬಿತಾ ಪುನಿಯಾ ತೀರ್ಪಿನಲ್ಲಿ ನ್ಯಾಯಾಲಯ ನಿರ್ದೇಶನ ನೀಡಿದ್ದರೂ, ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡಲು ಭಾರತೀಯ ಸೇನೆ ಮುಂದಾಗಿಲ್ಲ ಎಂದು ಸೇನೆಯ 34 ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಸೇನೆಯ 246 ಮಹಿಳಾ ಅಧಿಕಾರಿಗಳಿಗೆ ಉನ್ನತ ಹುದ್ದೆಗೆ ಬಡ್ತಿ ನೀಡುವುದಕ್ಕಾಗಿ ವಿಶೇಷ ಆಯ್ಕೆ ಮಂಡಳಿ ಆಯೋಜನೆ ಮಾಡುವುದಾಗಿ ಭಾರತೀಯ ಸೇನೆ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.  

ಬಬಿತಾ ಪುನಿಯಾ ತೀರ್ಪಿನಲ್ಲಿ ನ್ಯಾಯಾಲಯ ನಿರ್ದೇಶನ ನೀಡಿದ್ದರೂ, ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡಲು ಭಾರತೀಯ ಸೇನೆ ಮುಂದಾಗಿಲ್ಲ ಎಂದು ಸೇನೆಯ 34 ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್‌ ನರಸಿಂಹ ಅವರಿದ್ದ ಪೀಠ  ವಿಚಾರಣೆ ನಡೆಸುತ್ತಿದ್ದ ವೇಳೆ ಈ ವಿಚಾರ ತಿಳಿಸಲಾಗಿದೆ.

ಜನವರಿ 9, 2023 ರಂದು ಸರಿಸುಮಾರು 246 ಮಹಿಳಾ ಅಧಿಕಾರಿಗಳನ್ನು ಬಡ್ತಿಗಾಗಿ ಪರಿಗಣಿಸಲಾಗುವುದು ಎಂದು ಸೇನೆಯ ಪರ ಹಾಜರಾದ ಹಿರಿಯ ನ್ಯಾಯವಾದಿ ಆರ್‌ ಬಾಲಸುಬ್ರಮಣಿಯನ್‌ ಮಾಹಿತಿ ನೀಡಿದರು.

ಮಂಡಳಿಯು ಬಡ್ತಿ ನೀಡುವ ವಿವರಗಳನ್ನು ತನಗೆ ಸಲ್ಲಿಸಬೇಕೆಂದು ನಿರ್ದೇಶಿಸಿದ ನ್ಯಾಯಾಲಯ ಜನವರಿ 30, 2023ಕ್ಕೆ ಪ್ರಕರಣ ಮುಂದೂಡಿತು.

ಪ್ರತಿವಾದಿ ಭಾರತೀಯ ಸೇನೆಯು ತಮಗಿಂತ ಕಿರಿಯ ಪುರುಷ ಅಧಿಕಾರಿಗಳನ್ನು ಕರ್ನಲ್ ಶ್ರೇಣಿಗೆ ಬಡ್ತಿ ನೀಡುತ್ತಿದ್ದರೂ ಮಹಿಳೆಯರಾದ ತಮ್ಮನ್ನು ಕಡೆಗಣಿಸಿದ್ದಾರೆ. ಈ ಪ್ರಕ್ರಿಯೆಯು ಹಿರಿಯ ಮಹಿಳಾ ಅಧಿಕಾರಿಗಳಿಗೆ ಮಾಡಲಾದ ಅವಮಾನವಾಗಿದ್ದು, ಮನಬಂದಂತೆ ನಡೆದಿದೆ. ಇದು ನ್ಯಾಯಸಮ್ಮತವಲ್ಲ ಎಂದು ವಕೀಲ ರಾಕೇಶ್ ಕುಮಾರ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಲಾಗಿದೆ.

ತಮ್ಮ ಪುರುಷ ಸಹವರ್ತಿಗಳಿಗೆ ಸಮನಾಗಿ ಅರ್ಹ ಮಹಿಳಾ ಅಧಿಕಾರಿಗಳ ಬಡ್ತಿಗಾಗಿ ತ್ವರಿತವಾಗಿ ಆಯ್ಕೆ ಮಂಡಳಿ ಪ್ರಕ್ರಿಯೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅಲ್ಲದೆ, ತಮಗಿಂತಲೂ ಕಿರಿಯರಾದ ಪುರುಷ ಅಭ್ಯರ್ಥಿಗಳನ್ನು ಬಡ್ತಿಗೆ ಪರಿಗಣಿಸಲಾಗಿದ್ದು ಈ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.