Article 370 
ಸುದ್ದಿಗಳು

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿರುವ ಅರ್ಜಿಗಳ ತ್ವರಿತ ವಿಚಾರಣೆ ನಡೆಸಲು ಸುಪ್ರೀಂಗೆ ಮನವಿ

Bar & Bench

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ, 367ನೇ ವಿಧಿಯನ್ನು ಮಾರ್ಪಡಿಸಲು ಕಾರಣವಾದ 2019ರ ಸಾಂವಿಧಾನಿಕ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) ಆದೇಶದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ತ್ವರಿತವಾಗಿ ಮಾಡುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿ ಮನವಿಯೊಂದು ಸಲ್ಲಿಕೆಯಾಗಿದೆ.

ಶಾಕಿರ್‌ ಶಬೀರ್‌ ಎನ್ನುವವರು ಅರ್ಜಿಯನ್ನು ಸಲ್ಲಿಸಿದ್ದು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಆಕ್ಷೆಪಿಸಿ ಅವರು ಕಳೆದ ವರ್ಷ ಅರ್ಜಿಯನ್ನು ಸಲ್ಲಿಸಿದ್ದರು. ಆಗಸ್ಟ್‌ 5, 2019ರ ನಂತರ ಅನೇಕ ಪ್ರಮುಖ ಬದಲಾವಣೆಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಾಡಿದೆ. ಅಲ್ಲದೆ, ಅನೇಕ ಶಾಸನಗಳನ್ನೂ ಜಾರಿಗೊಳಿಸಲಾಗಿದೆ. ಇದೆಲ್ಲದರಿಂದ ಆಗಸ್ಟ್‌ 5, 2019ರ ಆಕ್ಷೇಪಿತ ಆದೇಶವು ಶಾಶ್ವತವಾಗುವ ಅಪಾಯವಿದೆ. ಹಾಗಾಗಿ “ಸಮಯ ಹೆಚ್ಚು ಕಳೆದಂತೆ” 370ನೇ ವಿಧಿಯ ರದ್ದತಿಯು ಶಾಶ್ವತವಾಗುವ ಸಾಧ್ಯತೆಯಿದ್ದು, ಇದು ಅರ್ಜಿಯನ್ನು ನಿಷ್ಫಲವಾಗಿಸಲಿದೆ ಎನ್ನುವ ಆತಂಕ ಕೂಡ ಅರ್ಜಿಯಲ್ಲಿ ವ್ಯಕ್ತವಾಗಿದೆ.

ಪ್ರಸ್ತುತ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲ್ಪಟ್ಟಿರುವ ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಅನೇಕ ಬದಲಾವಣೆಗಳನ್ನು ಸತತವಾಗಿ ಮಾಡುತ್ತಲೇ ಮುಂದುವರೆದಿದೆ. 370ನೇ ವಿಧಿಯ ರದ್ದತಿಯು, “ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜನರ ಒಳಿತಿಗಾಗಿ,” ಎಂದು ಹೇಳಲಾಗಿತ್ತು. ಆದರೆ, ಅದೇ ಜನತೆಯು ಇಂದು ಈ ಎಲ್ಲದರ ನಡುವೆ ಸಿಲುಕಿ "ತೊಂದರೆ ಅನುಭವಿಸುತ್ತಿದ್ದಾರೆ,” ಎನ್ನುವುದು ಸತ್ಯ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಪದೇಪದೇ ಇಂಟರ್‌ನೆಟ್‌ ಸಂಪರ್ಕ ಕಡಿತ, ವೇಗದ ತಗ್ಗಿಸುವಿಕೆಯಿಂದಾಗಿ ವಿದ್ಯಾರ್ಥಿಗಳು ಮತ್ತು ವ್ಯವಹಾರಗಳು ಸಮಸ್ಯೆಗೆ ಸಿಲುಕಿವೆ. ಅಷ್ಟು ಮಾತ್ರವೇ ಅಲ್ಲ, ಆಕ್ಷೇಪಿತ ಆದೇಶ ಮತ್ತು ಅನೇಕ ನಿರ್ಬಂಧಗಳಿಂದಾಗಿ ಆರ್ಥಿಕತೆ ಮತ್ತು ಸ್ಥಳೀಯರ ಜನಜೀವನವು ನಿರಂತರವಾಗಿ ಹಾನಿಗೊಳಗಾಗಿದೆ. ಕಾನೂನಿನಲ್ಲಿ ಮಾಡಲಾಗುವ ಪ್ರತಿಯೊಂದು ಬದಲಾವಣೆಯೂ ಸ್ಥಳೀಯರ ಮೇಲೆ ವೈಯಕ್ತಿಕ ಮಟ್ಟದಲ್ಲಿ ಗಂಭೀರ ಪರಿಣಾಮವನ್ನು ಉಂಟುಮಾಡುತ್ತಿವೆ, ವಿಪರ್ಯಾಸವೆಂದರೆ ಈ ಎಲ್ಲ ಪ್ರಕ್ರಿಯೆಗಳಿಂದ ಸ್ಥಳೀಯರನ್ನು ದೂರವಿರಿಸಲಾಗಿದೆ.”
ಹೈಕೋರ್ಟ್‌ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿನ ಅಂಶ

ಈ ಎಲ್ಲ ಕಾರಣಗಳಿಂದಾಗಿ 370ನೇ ವಿಧಿಯನ್ನು ರದ್ದುಗೊಳಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಗಳನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಅರ್ಜಿದಾರರು ಕೋರಿದ್ದಾರೆ.

ಇದೇ ವರ್ಷ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು 370ನೇ ವಿಧಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಗಳನ್ನು ಏಳು ಮಂದಿಯ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾವಣೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದನ್ನು ಇಲ್ಲಿ ನೆನೆಯಬಹುದು.