ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಆರೋಪ ಎದುರಿಸುತ್ತಿರುವ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗನ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ತನಿಖಾಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ. ಅಲ್ಲದೇ, ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ಯಾವುದೇ ವಸ್ತು ಜೈಲಿನ ಒಳಗೆ ಹೋಗಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
ತನ್ನ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ವಿಲ್ಸನ್ ಗಾರ್ಡನ್ ನಾಗ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರು ಮತ್ತು ಜೈಲಿನ ಅಧಿಕಾರಿಗಳ ಹೊಂದಾಣಿಕೆ ಇಲ್ಲದೆ ಯಾವುದೇ ವಸ್ತು ಜೈಲಿನ ಒಳಗೆ ಹೋಗುವುದಕ್ಕೆ ಅವಕಾಶವಿಲ್ಲ. ತನಿಖೆಗೆ ತಡೆಯೊಡ್ಡಬಾರದು ಎಂದು ಸರ್ಕಾರಿ ಅಭಿಯೋಜಕರು ಪ್ರತಿಪಾದಿಸುತ್ತಿದ್ದಾರೆ. ಆದ್ದರಿಂದ, ತನಿಖಾಧಿಕಾರಿಗಳು ತನಿಖೆಯನ್ನು ಮುಂದುವರಿಸಬಹುದು. ಆದರೆ, ತನಿಖೆಯ ನೆಪದಲ್ಲಿ ಅರ್ಜಿದಾರಿಗೆ ಕಿರುಕುಳ ನೀಡಬಾರದು. ಆತನ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು. ತನಿಖಾಧಿಕಾರಿಯು ಹೈಕೋರ್ಟ್ ಅನುಮತಿಯಿಲ್ಲದೆ ತನಿಖೆಯ ಅಂತಿಮ ವರದಿ ಸಲ್ಲಿಸಬಾರದು ಎಂದು ಮಧ್ಯಂತರ ಆದೇಶ ಮಾಡಿ ಅರ್ಜಿಯನ್ನು ಡಿಸೆಂಬರ್ 13ಕ್ಕೆ ನ್ಯಾಯಾಲಯ ವಿಚಾರಣೆ ಮುಂದೂಡಿತು.
ದರ್ಶನ್, ವಿಲ್ಸನ್ ಗಾರ್ಡನ್ ನಾಗನಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿರುವ ಮತ್ತು ಜೈಲಿನಲ್ಲಿ ಧೂಮಪಾನ ವಲಯ ತೆರೆದಿರುವ ವಿಚಾರವಾಗಿ ಸರ್ಕಾರ ಮತ್ತು ಜೈಲಿನ ಅಧಿಕಾರಿಗಳನ್ನು ಪೀಠವು ಹಾಸ್ಯ ಚಟಾಕಿ ಹಾರಿಸುತ್ತಲೇ ತರಾಟೆಗೆ ತೆಗೆದುಕೊಂಡಿತು.
ರಾಜ್ಯ ಹೆಚ್ಚುವರಿ ವಿಶೇಷ ಅಭಿಯೋಜಕ ಬಿ ಎನ್ ಜಗದೀಶ್ ಅವರು, ಅರ್ಜಿದಾರರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಪ್ರಕರಣ ಇದಾಗಿದೆ. ಇದೇ ಕಾರಣಕ್ಕೆ ಜೈಲಿನ ಅಧಿಕಾರಿಗಳನ್ನು ಅಭಿಯೋಜನೆ ಗುರಿಪಡಿಸಲಾಗುತ್ತಿದೆ. ಅದಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿ ಕೋರಲಾಗಿದೆ ಎಂದರು.
ಆಗ ಪೀಠವು "ಇಲ್ಲಿ ಅರ್ಜಿದಾರರ ತಪ್ಪೇನು? ಜೈಲಿನ ಒಳಗೆ ಸಿಗರೇಟು ಹೇಗೆ ಹೋಯ್ತು?" ಎಂದು ಪ್ರಶ್ನಿಸಿದರು.
ಇದಕ್ಕೆ ಜಗದೀಶ್ ಅವರು “ಈ ಕುರಿತು ವಿಚಾರಣೆ ನಡೆಯಬೇಕಿದೆ. ಅರ್ಜಿದಾರರು ಪ್ರತಿಫಲ ಪಡೆಯಲು ಜೈಲಿನ ಅಧಿಕಾರಿಗಳಿಗೆ ಹಣ ಪಾವತಿ ಮಾಡಿರಬಹುದು.ಆರೋಪಿಗಳಿಗೆ ಕುರ್ಚಿಗಳನ್ನೂ ಒದಗಿಸಲಾಗಿದೆ” ಎಂದರು.
ಅರ್ಜಿದಾರರು ಪರ ವಕೀಲರು “ನಾಗರಾಜು ಸಜಾ ಬಂಧಿಯಾಗಿದ್ದು, ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ನಾಗರಾಜು ಕಾಫಿ ಸೇವನೆ ಮಾಡುತ್ತಿದರಷ್ಟೇ. ಅವರ ಕೈಯಲ್ಲಿ ಸಿಗರೇಟ್ ಇರಲಿಲ್ಲ. ಸಿಗರೇಟ್ ಇದ್ದದ್ದು ದರ್ಶನ್ ಕೈಯಲ್ಲಿ. ನಾಲ್ಕನೇ ಆರೋಪಿ ತಂಬಾಕು ಸೇವನೆ ಮಾಡುತ್ತಿದ್ದರು. ನಾಗ ಎರಡನೇ ಆರೋಪಿ. ಇದೇ ಪ್ರಕರಣದ ನಾಲ್ಕನೇ ಆರೋಪಿ ಕುಳ್ಳ ಸೀನಾ ವಿರುದ್ಧದ ವಿಚಾರಣೆ ತಡೆ ನೀಡಲಾಗಿದೆ” ಎಂದರು. ಇದನ್ನು ಆಲಿಸಿದ ಪೀಠವು ಮಧ್ಯಂತರ ಆದೇಶ ಮಾಡಿ, ವಿಚಾರಣೆ ಮುಂದೂಡಿತು.