ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಆಪ್ತೆ ವಿ ಕೆ ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು ಲಂಚ ಪಡೆದ ಆರೋಪ ಸಂಬಂಧ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್, ಕರ್ನಾಟಕ ಕಾರಾಗೃಹ ಅಕಾಡೆಮಿಯ ಉಪ ನಿರ್ದೇಶಕಿ ಡಾ. ಆರ್ ಅನಿತಾ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಇನ್ಸ್‌ಪೆಕ್ಟರ್ ಗಜರಾಜ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಪೊಲೀಸ್ ಅಧಿಕಾರಿಗಳಾದ ಗಜರಾಜ ಮಾಕನೂರ್, ಡಾ. ಆರ್ ಅನಿತಾ ಮತ್ತು ಕೃಷ್ಣ ಕುಮಾರ್ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
ಪ್ರಕರಣದಲ್ಲಿ ಶಶಿಕಲಾ ಅವರಿಂದ ಎರಡು ಕೋಟಿ ರೂಪಾಯಿ ಲಂಚ ಪಡೆದು ಐಷಾರಾಮಿ ಸೌಲಭ್ಯ ಕಲ್ಪಿಸಿದ್ದರು ಎನ್ನಲಾಗಿದ್ದ ಕಾರಾಗೃಹ ಇಲಾಖೆಯ ನಿವೃತ್ತ ಡಿಜಿಪಿ ಎಚ್ ಎನ್ ಸತ್ಯನಾರಾಯಣ ಅವರು ಪ್ರಮುಖ ಆರೋಪಿಯಾಗಿದ್ದರು. ಅವರ ವಿರುದ್ಧ ಆರೋಪಗಳನ್ನು ಕೈ ಬಿಡಲಾಗಿದೆ. ಆದರೆ, ಎಸಿಬಿ ತನಿಖಾಧಿಕಾರಿಗಳು ಡಾ.ಅನಿತಾ ಮತ್ತು ಇತರೆ ಸಿಬ್ಬಂದಿಯನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಡಾ.ಅನಿತಾ ಅವರು ತಮ್ಮ ಉನ್ನತಾಧಿಕಾರಿಯಾಗಿದ್ದ ಮುಖ್ಯ ಜೈಲು ಅಧೀಕ್ಷಕ ಕೃಷ್ಣ ಕುಮಾರ್ ಅವರ ಸೂಚನೆಯಂತೆ ನಡೆದುಕೊಂಡಿದ್ದಾರೆ. ಆದರೆ, ಅನಿತಾ ವಿರುದ್ಧದ ವಿಚಾರಣೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ರದ್ದುಪಡಿಸಿದ್ದು, ಅದರ ಆಧಾರದ ಮೇಲೆ ಆಕೆ ವಿರುದ್ಧ ವಿಚಾರಣೆ ಸರ್ಕಾರ ಕೈಬಿಟ್ಟಿದೆ. ಆದರೂ ಇದೇ ಆರೋಪ ಸಂಬಂಧ ಅನಿತಾ ವಿರುದ್ಧ ಕ್ರಮ ಜರುಗಿಸಲು ಮತ್ತೊಮ್ಮೆ ಪೂರ್ವಾನುಮತಿ ನೀಡಲಾಗಿದೆ. ಇದು ಕಾನೂನಿನ ದುರ್ಬಳಕೆಯಾಗಿದೆ. ಆಕೆಯ ವಿರುದ್ಧ ಆರೋಪ ಮಾಡಲು ಆರೋಪ ಪಟ್ಟಿಯಲ್ಲಿ ಸೂಕ್ತ ಕಾರಣಗಳನ್ನೇ ನೀಡಿಲ್ಲ. ಆದ್ದರಿಂದ, ಅನಿತಾ ವಿರುದ್ಧ ಪ್ರಾಸಿಕ್ಯೂಷನ್‌ಗೆ 2021ರ ಡಿಸೆಂಬರ್ 30ರಂದು ನೀಡಲಾಗಿದ್ದ ಪೂರ್ವಾನುಮತಿ ಕಾನೂನು ಬಾಹಿರವಾಗಿದ್ದು, ರದ್ದುಪಡಿಸಲು ಅರ್ಹವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೃಷ್ಣ ಕುಮಾರ್ ವಿರುದ್ಧ ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಕೃಷ್ಣ ಕುಮಾರ್ ಅವರು ಲಂಚಕ್ಕೆ ಬೇಡಿಕೆಯಿಟ್ಟ ಮತ್ತು ಸ್ವೀಕರಿಸಿದ ಬಗ್ಗೆ ನೇರ-ನಿರ್ದಿಷ್ಟ ಆರೋಪಗಳು ಇಲ್ಲ. ಅವರ ವಿರುದ್ಧ ಇಲಾಖೆ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ದೋಷಿಯಾಗಿ ಸಾಬೀತಾಗಿಲ್ಲ. ಹೀಗಿರುವಾಗ, ಇದೇ ಆರೋಪದ ಸಂಬಂಧ ಡಾ.ಅನಿತಾ ವಿರುದ್ಧ ಪ್ರಕರಣಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಆದರೆ, ಕೃಷ್ಣ ಕುಮಾರ್ ವಿರುದ್ಧದ ಪ್ರಕರಣ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಮತ್ತೊಂದಡೆ ಸತ್ಯನಾರಾಯಣ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಹೀಗಿರುವಾಗ, ಕೃಷ್ಣ ಕುಮಾರ್ ವಿರುದ್ಧದ 2021ರ ಡಿಸೆಂಬರ್ 23ರಂದು ಪೂರ್ವಾನುಮತಿ ನೀಡಿರುವ ರಾಜ ಗೃಹ ಇಲಾಖೆ ಅಧೀನ ಕಾರ್ಯದರ್ಶಿಯ ಕ್ರಮ ವಿವೇಚನಾರಹಿತವಾಗಿದೆ. ಆದ್ದರಿಂದ ಕೃಷ್ಣ ಕುಮಾರ್ ವಿರುದ್ಧದ ಪ್ರಕರಣ ಮತ್ತು ಅವರ ವಿರುದ್ಧ ಕ್ರಮ ಜರುಗಿಸಲು ನೀಡಿರುವ ಪೂರ್ವಾನುಮತಿ ರದ್ದುಪಡಿಸಲು ಅರ್ಹವಾಗಿದೆ ಎಂದು ಆದೇಶಿಸಿದೆ.
ಇದೇ ವೇಳೆ ಪ್ರಕರಣದ ಮೊದಲನೇ ಆರೋಪಿಯಾಗಿರುವ ಕೃಷ್ಣ ಕುಮಾರ್ ವಿರುದ್ಧ ವಿವೇಚನೆ ಬಳಸಿ ಪೂರ್ವಾನುಮತಿ ನೀಡುವ ಕುರಿತಂತೆ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಲು ಸಕ್ಷಮ ಪ್ರಾಧಿಕಾರ ಮುಕ್ತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಗಜರಾಜ ಮಾಕನೂರ್ ಅವರು ನಾಲ್ಕನೇ ಆರೋಪಿಯಾಗಿದ್ದಾರೆ. ತನಿಖೆ ವೇಳೆ ಎಸಿಬಿ ಪೊಲಿಸರು ಗಜರಾಜ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಗಜರಾಜ ವಿರುದ್ಧದ ಲಂಚಕ್ಕೆ ಬೇಡಿಕೆಯಿಟ್ಟ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ವಸ್ತು/ದಾಖಲೆಗಳು ದೊರೆತಿಲ್ಲ. ಅವರ ವಿರುದ್ಧ ಲಂಚಕ್ಕೆ ಬೇಡಿಕೆಯಿಟ್ಟ ಮತ್ತು ಲಂಚ ಸ್ವೀಕರಿಸಿದ ಆರೋಪಗಳಿಲ್ಲ. ಪ್ರಕರಣ ಕುರಿತು ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಕುಮಾರ್ ಅವರಿಂದ ವರದಿ ಸ್ವೀಕರಿಸಿದ್ದ ಸರ್ಕಾರ, ಗಜರಾಜ ವಿರುದ್ಧ ಯಾವುದೇ ವಿಚಾರಣೆಗೆ ಆದೇಶಿಸಿಲ್ಲ. ಗಜರಾಜ ವಿರುದ್ಧ ಯಾವುದೇ ಆರೋಪಗಳು ಇಲ್ಲ ಎಂಬುದು ಸರ್ಕಾರಕ್ಕೆ ಗೊತ್ತಿತ್ತು. ಸರ್ಕಾರ ವಿಚಾರಣೆಗೆ ಆದೇಶ ಮಾಡದೆ ಹೋದರೂ ಎಸಿಬಿ ಮಾತ್ರ ಗಜರಾಜ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆದು ಆರೋಪ ಪಟ್ಟಿ ಸಲ್ಲಿಸಿದೆ. ಸರ್ಕಾರ ಸಹ ಗಜರಾಜ ವಿರುದ್ಧ ನಿರ್ದಿಷ್ಟ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಪರಿಶೀಲನೆಗೆ ಒಳಪಡಿಸದೆ ಕಣ್ಣು ಮುಚ್ಚಿಕೊಂಡು ಪ್ರಾಸಿಕ್ಯೂಷನ್‌ಗೆ 2021ರ ಅಕ್ಟೋಬರ್ 5ರಂದು ಅನುಮತಿ ನೀಡಿದೆ. ಇದು ಕಾನೂನು ದುರ್ಬಳಕೆ ಮತ್ತು ವಿವೇಚನ ರಹಿತವಾಗಿದ್ದು, ಅದನ್ನು ರದ್ದುಪಡಿಸಲು ಅರ್ಹವಾಗಿದೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ 2017ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಶಶಿಕಲಾ ಮತ್ತವರ ಸಂಬಂಧಿ ಇಳವರಸಿಗೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಸಂಬಂಧ ಅರ್ಜಿದಾರರ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿತ್ತು. ನಂತರ ಸರ್ಕಾರ ತನಿಖೆಯನ್ನು ಎಸಿಬಿಗೆ ವರ್ಗಾಯಿಸಿತ್ತು. ತನಿಖೆ ಪೂರ್ಣಗೊಳಿಸಿದ್ದ ಎಸಿಬಿಗೆ, ಅರ್ಜಿದಾರರ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಪೂರ್ವಾನುಮತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು.