Sharad Pawar
Sharad Pawar 
ಸುದ್ದಿಗಳು

ಸಂವಿಧಾನದ ವ್ಯಾಪ್ತಿಯಲ್ಲಿನ ಭಾಷಣ ದೇಶದ್ರೋಹವಲ್ಲ: ಭೀಮಾ ಕೋರೆಗಾಂವ್‌ ಆಯೋಗದ ಮುಂದೆ ಶರದ್‌ ಪವಾರ್‌ ಸಾಕ್ಷ್ಯ ದಾಖಲು

Bar & Bench

ಸಂವಿಧಾನದ ವ್ಯಾಪ್ತಿಯಲ್ಲಿ ಭಾಷಣ ಮಾಡಿದರೆ ಅವರು ದೇಶದ್ರೋಹಿಗಳಾಗುವುದಿಲ್ಲ ಎಂದು ಗುರುವಾರ ಭೀಮಾ ಕೋರೆಗಾಂವ್‌ ತನಿಖಾ ಆಯೋಗದ ಮುಂದೆ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಶರದ್‌ ಪವಾರ್‌ ಹೇಳಿದ್ದಾರೆ.

ಎಲ್ಗಾರ್ ಪರಿಷತ್‌ ಸಮಾವೇಶದಲ್ಲಿ 2017ರ ಡಿಸೆಂಬರ್‌ 31ರಂದು ದಲಿತ ಮತ್ತು ಮರಾಠಾ ಸಮುದಾಯಗಳ ನಡುವೆ ಸಂಭವಿಸಿದ ಹಿಂಸಾಚಾರ ತನಿಖೆ ನಡೆಸುತ್ತಿರುವ ಕಲ್ಕತ್ತಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ ಎನ್‌ ಪಟೇಲ್‌ ಮತ್ತು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಮೀತ್‌ ಮುಲ್ಲಿಕ್‌ ಅವರ ನೇತೃತ್ವದ ಆಯೋಗದ ಮುಂದೆ ಪವಾರ್‌ ಅವರು ಸಾಕ್ಷ್ಯ‌ ನುಡಿದಿದ್ದಾರೆ.

ಪವಾರ್‌ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದ ವಕೀಲ ಕಿರಣ್‌ ಚನ್ನೆ ಅವರು ಎಲ್ಗಾರ್ ಪರಿಷತ್‌ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮತ್ತು ಸಂಸದೀಯ ಪ್ರಜಾಪ್ರಭುತ್ವ ರಕ್ಷಿಸಲು ಹಾಗೂ ಸಂವಿಧಾನಾತ್ಮಕವಾಗಿ ನಡೆಯಲು ಪ್ರಮಾಣ ಸ್ವೀಕರಿಸಿದವರ ವಿರುದ್ಧ ದೇಶದ್ರೋಹ ಅಥವಾ ರಾಷ್ಟ್ರದ್ರೋಹಿಗಳು ಎಂದು ಪ್ರಕರಣ ದಾಖಲಿಸಿರುವುದು ಸರ್ಕಾರದ ಅಧಿಕಾರದ ದುರುಪಯೋಗವೇ ಎಂದು ಪ್ರಶ್ನಿಸಿದರು.

ಇದಕ್ಕೆ ಪವಾರ್‌ ಅವರು “ಭಾರತದ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ಭಾಷಣ ಮಾಡಿದವರನ್ನು ದೇಶದ್ರೋಹಿಗಳು ಎನ್ನಲಾಗದು” ಎಂದು ಉತ್ತರಿಸಿದರು.

ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ಪವಾರ್‌ ಅವರು ತಮ್ಮ ಭಾಷಣ ಉದ್ರೇಕಕಾರಿಯಾಗಿರಬಾರದು. ಅದು ಕಾನೂನು, ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ಉಂಟು ಮಾಡದಂತೆ ರಾಜಕೀಯ ಮುಖಂಡರು ಎಚ್ಚರವಹಿಸಬೇಕು ಎಂದು ಹೇಳಿದರು.

ಐಪಿಸಿ ಸೆಕ್ಷನ್‌ 124ಎ ಅಡಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸುವ ಮೂಲಕ ಹಲವು ಸಂದರ್ಭದಲ್ಲಿ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪವಾರ್‌ ಹೇಳಿದ್ದಾರೆ. “ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ದಾರಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಧ್ವನಿ ಅಡಗಿಸಲು ಐಪಿಸಿ ಸೆಕ್ಷನ್‌ 124ಎ ಅಡಿ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಸಭಾ ಸದಸ್ಯನಾಗಿರುವುದರಿಂದ ಸೂಕ್ತ ವೇದಿಕೆಯಾದ ಸಂಸತ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲು ನಾನು ಬಯಸುತ್ತೇನೆ ಎಂದು ಆಯೋಗಕ್ಕೆ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ ವಿವರಿಸಿದ್ದೇನೆ” ಎಂದು ಪವಾರ್‌ ತಿಳಿಸಿದ್ದಾರೆ.

ಬಂದ್‌ ಮತ್ತು ಆನಂತರ ನಡೆದ ಗಲಭೆಯಿಂದ ಉಂಟಾದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿ ನಷ್ಟಕ್ಕೆ ಪ್ರಚೋದನೆಗೆ ಪ್ರೇರೇಪಣೆ ನೀಡಿದ ನಾಯಕರು ಜವಾಬ್ದಾರರಾಗಿರುತ್ತಾರೆ ಎಂದು ಪವಾರ್‌ ಹೇಳಿದ್ದಾರೆ.

ಭೀಮಾ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್‌ ಸಮಾವೇಶಗಳು ಪ್ರತ್ಯೇಕವಾದವಾಗಿದ್ದು, ಎಲ್ಗಾರ್ ಪರಿಷತ್‌ ಸಮಾವೇಶದಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ, ದಿವಂಗತ ಪಿ ಬಿ ಸಾವಂತ್‌ ಅವರು ಭಾಗವಹಿಸಬೇಕಿತ್ತು ಎಂಬ ಮಾಹಿತಿ ನನಗಿದೆ. ಅವರು ಭಾಗವಹಿಸಿದ್ದರೆ ಏನೂ ಆಗುತ್ತಿರಲಿಲ್ಲವೇನೋ ಎಂದೆನಿಸುತ್ತದೆ. ಎಲ್ಗಾರ್ ಪರಿಷತ್‌ನಲ್ಲಿ ಭಾಷಣವು ತುಳಿತಕ್ಕೊಳಗಾದ ಮತ್ತು ಸಮಾಜದಲ್ಲಿ ತಾತ್ಸಾರಕ್ಕೆ ಒಳಗಾದ ಸಮುದಾಯಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತಿವೆ. ಇದು ಕಾನೂನಿನ ಅಡಿ ಅಪರಾಧವಲ್ಲ” ಎಂದು ಹೇಳಿದ್ದಾರೆ.