Supreme Court 
ಸುದ್ದಿಗಳು

ಏರ್‌ವೇಸ್‌ ಪ್ರಕರಣ: ಕಲಾನಿಧಿ ಮಾರನ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ಉಚ್ಚ ನ್ಯಾಯಾಲಯಕ್ಕೆ ಬುದ್ಧಿವಾದ

ಕಲಾನಿಧಿ ಮಾರನ್ ಅವರಿಗೆ ₹ 270 ಕೋಟಿ ಮರುಪಾವತಿ ಮಾಡುವಂತೆ ಸ್ಪೈಸ್‌ಜೆಟ್‌ಗೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದ್ದ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

Bar & Bench

ಸನ್ ಗ್ರೂಪ್ ಪ್ರವರ್ತಕ ಕಲಾನಿಧಿ ಮಾರನ್‌ ಅವರಿಗೆ ₹270 ಕೋಟಿ ಮರುಪಾವತಿಸುವಂತೆ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿ ದೆಹಲಿ ಹೈಕೋರ್ಟ್ ‌ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ [ಕೆಎಎಲ್‌ ಏರ್‌ವೇಸ್‌ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಪೈಸ್‌ಜೆಟ್‌ ಲಿಮಿಟೆಡ್‌ ನಡುವಣ ಪ್ರರಕಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ  ಶುಕ್ರವಾರ ತೀವ್ರವಾಗಿ ಖಂಡಿಸಿದೆ.

ಇದೊಂದು ಘೋರ ತೀರ್ಪು. ಇದನ್ನು ನೀಡುವಾಗ ನ್ಯಾಯಮೂರ್ತಿಗಳು ತಮ್ಮ ವಿವೇಚನೆ ಬಳಸಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಮಾರನ್‌ ಅವರಿಗೆ ₹ 270 ಕೋಟಿ ಮರುಪಾವತಿ ಮಾಡುವಂತೆ ಸ್ಪೈಸ್‌ಜೆಟ್‌ಗೆ ನಿರ್ದೇಶಿಸಿ ಮಧ್ಯಸ್ಥಿಕೆ ನ್ಯಾಯಮಂಡಳಿ 2018ರಲ್ಲಿ ನೀಡಿದ್ದ ತೀರ್ಪನ್ನು ಏಕಸದಸ್ಯ ಪೀಠ ಎತ್ತಿಹಿಡಿದಿತ್ತು. ಈ ಸಂಬಂಧ ಅದು ಎರಡು ತೀರ್ಪು ನೀಡಿತ್ತು.

ಈ ತೀರ್ಪಿನ ವಿರುದ್ಧ ಸ್ಪೈಸ್‌ಜೆಟ್, ಅದರ ಅಧ್ಯಕ್ಷ  ಹಾಗೂ  ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಅಜಯ್ ಸಿಂಗ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿತ್ತು. ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 34 ರ ಅಡಿಯಲ್ಲಿ ಮಧ್ಯಸ್ಥಿಕೆ ತೀರ್ಪಿನ ಸವಾಲನ್ನು ಹೊಸದಾಗಿ ನಿರ್ಧರಿಸುವಂತೆ ವಿಭಾಗೀಯ ಪೀಠ ಆದೇಶಿಸಿತ್ತು. ಪರಿಣಾಮ, ಮಾರನ್ ಪರವಾಗಿ ಆದೇಶಿಸಿದ್ದ ₹270 ಕೋಟಿ ಮರುಪಾವತಿಯನ್ನೂ ಹೈಕೋರ್ಟ್ ವಿಭಾಗೀಯ ಪೀಠ ತಡೆಹಿಡಿದಿತ್ತು.

ಈ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಮಾರನ್‌, ವಿಭಾಗೀಯ ಪೀಠ ತನ್ನ ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದೆ ಎಂದು ವಾದಿಸಿದ್ದರು.

ಸುಪ್ರೀಂ ಕೋರ್ಟ್ ಇದೀಗ ಮಾರನ್ ಅವರ ಮನವಿಯನ್ನು ವಜಾಗೊಳಿಸಿದ್ದು ಹೈಕೋರ್ಟ್‌  ವಿಭಾಗೀಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ. ತೀರ್ಪು ನೀಡಿದ್ದ ಏಕಸದಸ್ಯ ಪೀಠ ಪ್ರಕರಣವನ್ನು ವಿಚಾರಣೆ ನಡೆಸದೆ ಬೇರೆ ನ್ಯಾಯಮೂರ್ತಿಗಳಿಂದ ಪ್ರಕರಣದ ವಿಚಾರಣೆ ನಡೆಯಬೇಕು ಎಂದು ಅದು ಆದೇಶಿಸಿದೆ.