Jawahar Lal Nehru Stadium (Picture for representation only)  
ಸುದ್ದಿಗಳು

ದೇಶದ ಕ್ರೀಡಾ ಸಂಸ್ಥೆಗಳು ರೋಗಗ್ರಸ್ತವಾಗಿವೆ: ಸುಪ್ರೀಂ ಕೋರ್ಟ್

ಈ ಎಲ್ಲಾ ಕ್ರೀಡಾ ಸಂಘಗಳಲ್ಲಿ ಕ್ರೀಡೆಗೆ ಸಂಬಂಧಿಸಿದ್ದೇನೂ ಇಲ್ಲ ಎಂದು ನ್ಯಾಯಾಲಯ ಕಿವಿ ಹಿಂಡಿತು.

Bar & Bench

ಭಾರತದಲ್ಲಿನ ಕ್ರೀಡಾ ಸಂಸ್ಥೆಗಳು ರೋಗಗ್ರಸ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಟೀಕಿಸಿದೆ.

ಮಹಾರಾಷ್ಟ್ರ ಕುಸ್ತಿ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

"ಈ ಎಲ್ಲಾ ಕ್ರೀಡಾ ಸಂಘಗಳಲ್ಲಿ ಕ್ರೀಡೆಗೆ ಸಂಬಂಧಿಸಿದ್ದೇನೂ ಉಳಿದಿಲ್ಲ. ಎಲ್ಲವೂ ಅನಾರೋಗ್ಯ ಪೀಡಿತ ಸಂಸ್ಥೆಗಳು, ಅವು ಯಾವುದಕ್ಕಾಗಿ ಹೋರಾಡುತ್ತಿವೆ ಎಂದು ನಮಗೆ ತಿಳಿದಿಲ್ಲ " ಎಂಬುದಾಗಿ ನ್ಯಾಯಾಲಯ ಪ್ರಕರಣದ ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.

ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಕ್ರೀಡಾ ಸಂಸ್ಥೆಗಳು ಮತ್ತು ಅವುಗಳ ನಿರ್ವಹಣೆಗೆ ಸಂಬಂಧಿಸಿದ ಅನೇಕ ಪ್ರಕರಣಗಳ ವಿಚಾರಣೆ ಬಾಕಿ ಇರುವ ಸಂದರ್ಭದಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಈ ಅವಲೋಕನ ಮಾಡಿದೆ.

ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ) ತನ್ನ ಸದಸ್ಯತ್ವ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಮಹಾರಾಷ್ಟ್ರ ಕುಸ್ತಿ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಂಘ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಹೈಕೋರ್ಟ್‌ನ ಏಕ ಸದಸ್ಯ ಪೀಠ ಅರ್ಜಿ ನಿರ್ವಹಣಾರ್ಹವಲ್ಲ ಎಂದು ತಿಳಿಸಿ ಸೂಕ್ತ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ಅದನ್ನು ವಜಾಗೊಳಿಸಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸಂಘ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತಿತರ ಪ್ರತಿವಾದಿಗಳಿಗೆ ಜನವರಿ 15ರಂದು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು.

ಅರ್ಜಿದಾರರ ಪರ ಯಾವುದೇ ವಕೀಲರು ಹಾಜರಾಗದ ಕಾರಣ ಇಂದು ಪ್ರಕರಣ ಮುಂದೂಡಲಾಯಿತು.

ಪ್ರತಿವಾದಿಗಳ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಪರಿಹಾರ ಪಡೆಯದೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿದರು.