playground 
ಸುದ್ದಿಗಳು

ಕ್ರೀಡೆ ಶಿಕ್ಷಣದ ಅವಿಭಾಜ್ಯ ಭಾಗ: ಶಾಲೆಗಳಿಗೆ ಮೈದಾನದ ಲಭ್ಯತೆ ಇರುವಂತೆ ನೋಡಿಕೊಳ್ಳಲು ಸೂಚಿಸಿದ ಮದ್ರಾಸ್‌ ಹೈಕೋರ್ಟ್

ಚೆನ್ನೈ ಜಿಲ್ಲೆಯಲ್ಲಿರುವ ಒಟ್ಟು ಶಾಲೆಗಳಲ್ಲಿ ಶೇ. 25ರಷ್ಟು ಶಾಲೆಗಳಲ್ಲಿ ಅಟದ ಮೈದಾನವಿಲ್ಲ ಎನ್ನುವುದನ್ನು ಗಮನಿಸಿದ ಪೀಠವು ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿತು.

Bar & Bench

ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಶಗಳಾಗಿವೆ ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದು ಎಲ್ಲ ಶಾಲೆಗಳು ದೈಹಿಕ ಶಿಕ್ಷಣಕ್ಕೆ ಅಗತ್ಯವಾದ ಸೂಕ್ತ ಮೂಲಸೂಕರ್ಯ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ [ಡಾ. ಪಿ ಆರ್‌ ಸುಭಾಶ್‌ಚಂದ್ರನ್‌ ವರ್ಸಸ್‌ ತಮಿಳುನಾಡು ಸರ್ಕಾರ].

ಚೆನ್ನೈ ಜಿಲ್ಲೆಯಲ್ಲಿರುವ ಒಟ್ಟು ಶಾಲೆಗಳಲ್ಲಿ ಶೇ. 25ರಷ್ಟು ಶಾಲೆಗಳು ಅಟದ ಮೈದಾನವನ್ನು ಹೊಂದಿಲ್ಲ ಎನ್ನುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ಭಂಡಾರಿ ಮತ್ತು ನ್ಯಾ. ಎನ್‌ ಮಾಲಾ ಪೀಠವು ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿತು.

"ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಶಗಳಾಗಿವೆ ಎನ್ನುವುದನ್ನು ಈ ಸಂದರ್ಭದಲ್ಲಿ ಮುಖ್ಯವಾಗಿ ಹೇಳಬೇಕಾಗುತ್ತದೆ. ಕ್ರೀಡೆಗಾಗಿ ಮೂಲಸೌಕರ್ಯ ಕಲ್ಪಿಸುವುದು ಅತ್ಯಗತ್ಯವಾಗಿದೆ. ದೈಹಿಕ ಚಟುವಟಿಕೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ ಸಹಭಾಗಿತ್ವ, ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಪೋಷಿಸುತ್ತದೆ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತು.

ಹಾಗಾಗಿ ನ್ಯಾಯಾಲಯವು ಎಲ್ಲ ಶಾಲೆಗಳು ಮೈದಾನಗಳ ಲಭ್ಯತೆ ಹಾಗೂ ದೈಹಿಕ ಶಿಕ್ಷಣಕ್ಕೆ ಅಗತ್ಯವಿರುವ ಮೂಲಸೌಕರ್ಯ ಹೊಂದುವುದನ್ನು ದೃಢಪಡಿಸಿಕೊಳ್ಳಲು ಸಮತಿಯೊಂದನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಒತ್ತು ನೀಡಲು, ಮೂಲಸೌಕರ್ಯ ಕಲ್ಪಿಸಲು ಕೋರಿ ಡಾ. ಪಿ ಆರ್‌ ಸುಭಾಶ್‌ಚಂದ್ರನ್‌ ಎನ್ನುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು. ಕಳೆದ ವಾರ ಸರ್ಕಾರದ ಪರ ವಕೀಲರು ಸಲ್ಲಿಸಿದ್ದ ಮಾಹಿತಿಯಂತೆ ಚೆನ್ನೈ ಜಿಲ್ಲೆಯಲ್ಲಿರುವ 1434 ಶಾಲೆಗಳಲ್ಲಿ 367 ಶಾಲೆಗಳು ಮೈದಾನದ ಸೌಕರ್ಯ ಹೊಂದಿಲ್ಲ ಎನ್ನುವುದು ತಿಳಿದು ಬಂದಿತ್ತು.