CM Siddaramaiah 
ಸುದ್ದಿಗಳು

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಹಂಚಿಕೆ ಆರೋಪ: ಮೂವರ ವಿರುದ್ಧದ ತನಿಖೆಗೆ ತಡೆ ನೀಡಿದ ಹೈಕೋರ್ಟ್‌

ಸಿಎಂ ಹೇಳಿಕೆ ಎಂದು 2024ರ ಏ.9ರಂದು ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು. ಇದನ್ನು ‘ಬಿಎಸ್‌ವೈ ಬೆಂಬಲಿಗರು’ ಎಂಬ ಹೆಸರಿನಲ್ಲಿ ಅರ್ಜಿದಾರರು ವಾಟ್ಸಾಪ್, ಟ್ವಿಟರ್‌ ಮತ್ತಿತರ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂಬುದು ಆರೋಪ.

Bar & Bench

“ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ. ಮುಸ್ಲಿಮರ ಓಲೈಕೆ ಬಗ್ಗೆ, ಬಿಜೆಪಿಗರ ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ” ಎಂಬ ಆರೋಪ ಎದುರಿಸುತ್ತಿರುವ ಮೂವರ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ತಡೆ ನೀಡಿದೆ.

ತಮ್ಮ ವಿರುದ್ಧ ಬೆಂಗಳೂರು ಪಶ್ಚಿಮ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಜರಗನಹಳ್ಳಿಯ ವಿ ಪ್ರಭಾಕರ ರೆಡ್ಡಿ, ಬೆಂಗಳೂರಿನ ಉತ್ತರ ವಿದ್ಯಾರಣ್ಯಪುರದ ಎಚ್ ಎನ್ ವಿಜಯಕುಮಾರ್ ಮತ್ತು ದಾವಣಗೆರೆಯ ವಿರೂಪಾಕ್ಷ ಬಣಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಸಂತ ಕುಮಾರ್‌ “ಅರ್ಜಿದಾರ ಆರೋಪಿಗಳು ಮೂಲ ಸುದ್ದಿಯ ಜನಕರಲ್ಲ. ತಮಗೆ ಬಂದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರಷ್ಟೇ. ಇದು ತಪ್ಪಾದ ಸುಳ್ಳು ಸುದ್ದಿ. ಪೊಲೀಸರು ವಿಧಿಸಿರುವ ಅಪರಾಧ ಸೆಕ್ಷನ್‌ಗಳು ಅರ್ಜಿದಾರರಿಗೆ ಅನ್ವಯ ಆಗುವುದಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದರು.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್ ಅವರು “ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಒಟ್ಟು ಏಳು ಜನ ಆರೋಪಿಗಳಿದ್ದಾರೆ. ಇದರಲ್ಲಿ ಮೂವರು ಆರೋಪಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಉಳಿದವರ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕಿದೆ. ಹಾಗಾಗಿ, ಇಡೀ ಪ್ರಕರಣಕ್ಕೆ ತಡೆ ನೀಡಬಾರದು. ಈಗ ನ್ಯಾಯಾಲಯದ ಮೆಟ್ಟಿಲೇರಿರುವ ಆರೋಪಿಗಳು ತನಿಖೆಗೆ ಸಹಕರಿಸಲಿ. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ” ಎಂದು ಹೇಳಿದರು.

ಇದನ್ನು ಆಲಿಸಿದ ಪೀಠವು "ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರು ಅರ್ಜಿದಾರರಲ್ಲದೇ ಇತರೆ ಆರೋಪಿಗಳು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿ ಉತ್ತರ ನೀಡುವುದು ಅವರ (ಇತರೆ ಆರೋಪಿಗಳ) ಕೆಲಸ. ಬೇರೊಬ್ಬರು ಸೃಷ್ಟಿಸಿದ ಸುದ್ದಿಯ ತುಣುಕನ್ನು ವರ್ಗಾವಣೆ ಮಾಡಿದ ಮಾತ್ರಕ್ಕೆ ಅರ್ಜಿದಾರರ ವಿರುದ್ಧ ಸುಪ್ರೀಂ ಕೋರ್ಟ್‌ ಜಾವೇದ್‌ ಅಜಂ ಪ್ರಕರಣದ ತೀರ್ಪಿನ ಅನ್ವಯ ತನಿಖೆಗೆ ಅನುಮತಿಸಲಾಗದು. ಹೀಗಾಗಿ, ಅರ್ಜಿದಾರರ ವಿರುದ್ಧದ ತನಿಖೆಗೆ ಮಾತ್ರ ತಡೆ ವಿಧಿಸಲಾಗಿದೆ. ಉಳಿದ ಆರೋಪಿಗಳ ವಿರುದ್ಧದ ತನಿಖೆ ತಡೆ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ" ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸಿದ್ದರಾಮಯ್ಯ ಅವರ ಹೇಳಿಕೆ ಎಂದು 2024ರ ಏಪ್ರಿಲ್ 9ರಂದು ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು. ಇದನ್ನು ‘ಬಿಎಸ್‌ವೈ ಬೆಂಬಲಿಗರು’ ಎಂಬ ಹೆಸರಿನಲ್ಲಿ ಅರ್ಜಿದಾರರು ವಾಟ್ಸ್‌ ಆ್ಯಪ್‌, ಟ್ವಿಟರ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ’ ಎಂದು ಆರೋಪಿಸಿ ಹರೀಶ್ ನಾಗರಾಜು ಬೆಂಗಳೂರು ಪಶ್ಚಿಮ ಸೆನ್‌ ಪೊಲೀಸ್ ಠಾಣೆಗೆ ಏಪ್ರಿಲ್ 10ರಂದು ದೂರು ನೀಡಿದ್ದರು.