Senior Advocate Dr. S Muralidhar  
ಸುದ್ದಿಗಳು

ಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷ: ಸ್ವತಂತ್ರ ವಿಚಾರಣಾ ಆಯೋಗದ ಅಧ್ಯಕ್ಷರಾಗಿ ನ್ಯಾ. ಮುರಳೀಧರ್‌ ನೇಮಕ

ಇಸ್ರೇಲ್‌-ಪ್ಯಾಲೆಸ್ತೀನ್‌ ನಡುವಿನ ಸಂಘರ್ಷದಲ್ಲಿ ಸಂಭವಿಸಿರುವ ಜೀವಹಾನಿ, ಮಾನವ ಹಕ್ಕುಗಳ ದಮನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಶ್ವಸಂಸ್ಥೆಯು ಆಯೋಗದ ಅಧ್ಯಕ್ಷರಾಗಿ ಭಾರತ ನ್ಯಾಯವೇತ್ತರೊಬ್ಬರನ್ನು ನೇಮಿಸಿರುವುದು ಮಹತ್ವ ಪಡೆದಿದೆ

Bar & Bench

ಒರಿಸ್ಸಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನು ವಿಶ್ವಸಂಸ್ಥೆಯು ಇಸ್ರೇಲ್‌ ಆಕ್ರಮಿತ ಪ್ಯಾಲೆಸ್ಟೈನ್ ಪ್ರದೇಶವೂ ಸೇರಿದಂತೆ, ಪೂರ್ವ ಜೆರುಸೆಲಂ ಮತ್ತು ಇಸ್ರೇಲ್‌ನಲ್ಲಿ ಸಂಭವಿಸಿದ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರಣೆಗಾಗಿ ರಚಿಸಿರುವ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ.

ಇಸ್ರೇಲ್‌-ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷದಲ್ಲಿ ಸಂಭವಿಸಿರುವ ಅಪಾರ ಪ್ರಮಾಣದ ಜೀವಹಾನಿ, ಮಾನವ ಹಕ್ಕುಗಳ ದಮನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ಭಾರತ ನ್ಯಾಯವೇತ್ತರೊಬ್ಬರನ್ನು ನೇಮಿಸಿರುವುದು ಮಹತ್ವ ಪಡೆದಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಅಧ್ಯಕ್ಷ ರಾಯಭಾರಿ ಜುರ್ಗ್ ಲಾಬರ್ ಅವರು ನೇಮಕಾತಿಯನ್ನು ಪ್ರಕಟಿಸಿದ್ದಾರೆ.

ನ್ಯಾಯಮೂರ್ತಿ ಮುರಳೀಧರ್ ಅವರು ಸಂಘರ್ಷದ ಎರಡೂ ಕಡೆಗಳಲ್ಲಿ ಸಂಭವಿಸಿರುವ ಅಂತಾರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನಿನ ಉಲ್ಲಂಘನೆಗಳನ್ನು ಪರಿಶೀಲಿಸುವ ಕಾರ್ಯವನ್ನು ಮೂವರು ಸದಸ್ಯರನ್ನು ಹೊಂದಿರುವ ಆಯೋಗದಿಂದ ನಡೆಸಲಿದ್ದಾರೆ. ಜಾಂಬಿಯಾದ ಫ್ಲಾರೆನ್ಸ್ ಮುಂಬಾ ಮತ್ತು ಆಸ್ಟ್ರೇಲಿಯಾದ ಕ್ರಿಸ್ ಸಿಡೋಟಿ ಅವರು ಆಯೋಗದಲ್ಲಿರುವ ಇನ್ನಿಬ್ಬರು ಸದಸ್ಯರಾಗಿದ್ದಾರೆ.

2021ರಲ್ಲಿ ವಿಶ್ವಸಂಸ್ಥೆಯು ಕೈಗೊಂಡಿರುವ ನಿರ್ಣಯ S-30/1ರ ಅನ್ವಯ ಆಯೋಗವನ್ನು ರಚಿಸಲಾಗಿತ್ತು. ಈ ನಿರ್ಣಯವು ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಮತ್ತು ಇಸ್ರೇಲ್‌ನಲ್ಲಿ" ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿರಂತರ ತನಿಖೆಯನ್ನು ಕಡ್ಡಾಯಗೊಳಿಸಿದೆ.

ಈ ಪ್ರದೇಶದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಸಮಸ್ಯೆಯ ಮೂಲವನ್ನು ಆಯೋಗವು ತನಿಖೆ ನಡೆಸಲು ವಿಶ್ವಸಂಸ್ಥೆಯ ನಿರ್ಣಯವು ಅಧಿಕಾರ ನೀಡುತ್ತದೆ. ಅಲ್ಲದೆ, ಧರ್ಮ, ಜನಾಂಗೀಯತೆ, ಅಸ್ಮಿತೆಗಳ ಆಧಾರದಲ್ಲಿ ನಡೆಯುವ ವ್ಯವಸ್ಥಿತ ತಾರತಮ್ಯವನ್ನು ಸಹ ಆಯೋಗವು ಗಮನಿಸಲಿದೆ.

ನ್ಯಾಯಮೂರ್ತಿ ಮುರಳೀಧರ್ ಅವರ ನೇಮಕಾತಿಯು ಅವರನ್ನು ಈ ವಿಚಾರಣೆಗಳ ಕೇಂದ್ರಬಿಂದುವನ್ನಾಗಿ ಮಾಡಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾ ಗೌರವ, ಮನ್ನಣೆ ಪಡೆದಿರುವ ನ್ಯಾಯಶಾಸ್ತ್ರಜ್ಞರಾದ ಮುರಳೀಧರ್ ಅವರು ಸುಮಾರು ಎರಡು ದಶಕಗಳ ಕಾಲ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ನಡೆಸಿದ ಅನುಭವ ಹೊಂದಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ 2006 ರಲ್ಲಿ ನೇಮಕಗೊಂಡ ಅವರು 2021ರಲ್ಲಿ ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು, ಅಲ್ಲಿ ಅವರ ಅಧಿಕಾರಾವಧಿಯಲ್ಲಿ ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣ ಮತ್ತು ನ್ಯಾಯಾಂಗ ಆರ್ಕೈವ್ಸ್ ಮತ್ತು ನ್ಯಾಯ ವಸ್ತು ಸಂಗ್ರಹಾಲಯದ ಸ್ಥಾಪನೆ ಸೇರಿದಂತೆ ಗಮನಾರ್ಹ ಸಾಂಸ್ಥಿಕ ಸುಧಾರಣೆಗಳು ಕಂಡುಬಂದವು. 2023 ರಲ್ಲಿ ನಿವೃತ್ತರಾದ ನಂತರ, ಅವರು ಕಾನೂನು ವಕೀಲಿಕೆಗೆ ಮರಳಿದರು. ಅಲ್ಲದೆ, ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಕಗೊಂಡರು.