ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಹುಟ್ಟು ಹಾಕಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಾರತ ಸಂವಿಧಾನದ 12ನೇ ವಿಧಿಯಡಿ ʼರಾಷ್ಟ್ರʼ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
71 ವರ್ಷದ ನಿವೃತ್ತ ಎಂಜಿನಿಯರ್ ಅವರು ತಮ್ಮನ್ನು ಗೌರವ ಸಂಭಾವನೆಗೆ ಒಳಪಟ್ಟಂತೆ ಟ್ರಸ್ಟ್‌ನ ಮುಖ್ಯ ಎಂಜಿನಿಯರ್ ಆಗಿ ನೇಮಕ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಸಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
“ಸಂವಿಧಾನದ 12ನೇ ವಿಧಿಯಡಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ʼಪ್ರಭುತ್ವʼದ ವ್ಯಾಪ್ತಿಗೆ ಸೇರಿಲ್ಲ. ಹೀಗಾಗಿ, ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಆದ್ದರಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಅರ್ಜಿದಾರರನ್ನು ಮುಖ್ಯ ಎಂಜಿನಿಯರ್ ಆಗಿ ನೇಮಕ ಮಾಡಲು ಆದೇಶ ಮಾಡಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಚ್ ಎಂ ಉಮೇಶ್ ಅವರು “ಅರ್ಜಿದಾರರನ್ನು ಗೌರವ ಸಂಭಾವನೆಗೊಳಪಟ್ಟು ಮುಖ್ಯ ಎಂಜಿನಿಯರ್ ಆಗಿ ನೇಮಕ ಮಾಡುವ ಸಂಬಂಧ ಹಲವು ಮನವಿಗಳನ್ನು ಸಲ್ಲಿಸಿದ್ದು, ಅವುಗಳನ್ನು ತಿರಸ್ಕರಿಸಲಾಗಿದೆ” ಎಂದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಹಾಯಕ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು “ನೇಮಕಾತಿಗೆ ಸಂಬಂಧಿಸಿದಂತೆ ಕೇಳುವ ಯಾವುದೇ ಹಕ್ಕು ಅರ್ಜಿದಾರರಿಗೆ ಇಲ್ಲ. ಅದರಲ್ಲೂ ರಾಮ ಜನ್ಮಭೂಮಿ ಟ್ರಸ್ಟ್ ವಿಚಾರದಲ್ಲಿ ಇಲ್ಲವೇ ಇಲ್ಲ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂವಿಧಾನದ 12ನೇ ವಿಧಿಯಡಿ ʼಪ್ರಭುತ್ವʼದ ವ್ಯಾಪ್ತಿಗೆ ಒಳಪಡುವುದಿಲ್ಲ” ಎಂದರು.
ನ್ಯಾಯಾಲಯದ ಆದೇಶ ಕೋರುವುದಕ್ಕೂ ಮುನ್ನ ಅರ್ಜಿದಾರರು ತಮ್ಮ ಕಾನೂನುಬದ್ಧ ಹಕ್ಕನ್ನು ತೋರಿಸುವುದರ ಜೊತೆಗೆ ಮನವಿ ಪರಿಗಣಿಸಲು ಪ್ರಾಧಿಕಾರದೆಡೆಗಿನ ತಮ್ಮ ಕರ್ತವ್ಯವನ್ನು ಸಾಬೀತುಪಡಿಸಬೇಕು. ಹಾಲಿ ಪ್ರಕರಣದಲ್ಲಿ ಅರ್ಜಿದಾರರಿಗೆ ಯಾವುದೇ ತೆರನಾದ ಹಕ್ಕಿಲ್ಲ. ಹೀಗಾಗಿ, ಕೇಂದ್ರ ಸರ್ಕಾರವು ಮನವಿ ಪರಿಗಣಿಸುವ ಜವಾಬ್ದಾರಿ ಹೊಂದಿಲ್ಲ ಎಂದಿರುವ ಪೀಠವು ಅರ್ಜಿ ವಜಾ ಮಾಡಿದೆ.