ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ (ಈ ಹಿಂದಿನ ಹೆಸರು ವಸೀಂ ರಿಜ್ವಿ) ಅವರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸುವಂತೆ ಶ್ರೀನಗರದ ನ್ಯಾಯಾಲಯ ಫೆಬ್ರವರಿ 20ರಂದು ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅವರಿಗೆ ನಿರ್ದೇಶನ ನೀಡಿದೆ. [ಡ್ಯಾನಿಶ್ ಹಸನ್ ದರ್ ಮತ್ತು ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಅಲಿಯಾಸ್ ವಸೀಂ ರಿಜ್ವಿ ನಡುವಣ ಪ್ರಕರಣ].
ಹಲವು ಪ್ರಯತ್ನಗಳ ಹೊರತಾಗಿಯೂ, ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸುವುದು ಸಾಧ್ಯವಾಗಲಿಲ್ಲ ಎಂಬ ವಾದ ಗಮನಿಸಿದ ಶ್ರೀನಗರದ 2ನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್ ಭಾರದ್ವಾಜ್ ಈ ಆದೇಶ ನೀಡಿದರು.
ಕಾನೂನು ಕ್ರಮ ಕೈಗೊಳ್ಳುವ ಮತ್ತು ಆರೋಪಿಗಳ ಹಾಜರಾತಿಯಾಗುವಂತೆ ನೋಡಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿದ ನ್ಯಾಯಾಧೀಶರು, ತ್ಯಾಗಿಯವರನ್ನು ಬಂಧಿಸಿ ಮುಂದಿನ ವಿಚಾರಣೆ ನಡೆಯಲಿರುವ ಏಪ್ರಿಲ್ 25ರೊಳಗೆ ಹಾಜರುಪಡಿಸಲು ಶ್ರೀನಗರದ ಎಸ್‌ಎಸ್‌ಪಿಗೆ ನಿರ್ದೇಶನ ನೀಡಿದರು.
ತಾವು ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿ ಡ್ಯಾನಿಶ್ ಹಸನ್ ದರ್ ಅವರು ಡಿಸೆಂಬರ್ 15, 2021ರಂದು ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಐಪಿಸಿ ಸೆಕ್ಷನ್ 153 (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು), 295 ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಮತ್ತು 505 (ಸಾರ್ವಜನಿಕರಿಗೆ ಕಿರುಕುಳ ಉಂಟುಮಾಡುವಂತಹ ಹೇಳಿಕೆಗಳು) ಅಡಿಯಲ್ಲಿ ತ್ಯಾಗಿ ತಪ್ಪಿತಸ್ಥರು ಎಂದು ದರ್ ಆರೋಪಿಸಿದ್ದರು.
ಡಿಸೆಂಬರ್ 6, 2021ರಲ್ಲಿ, ಇಸ್ಲಾಂನಿಂದ ಹಿಂದೂಧರ್ಮಕ್ಕೆ ಮತಾಂತರಗೊಂಡ ನಂತರ, ತ್ಯಾಗಿ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಇಸ್ಲಾಂ ಮತ್ತು ಪ್ರವಾದಿಯವರ ವಿರುದ್ಧ ಅವಹೇಳನಕರ ಹೇಳಿಕೆ ನೀಡಿದ್ದರು ಎಂದು ಅವರು ದೂರಿದ್ದರು.