Madal Virupakshappa 
ಸುದ್ದಿಗಳು

ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣ: ಎಸ್‌ಐಟಿ ತನಿಖೆಗೆ ವಹಿಸಲು ಕೋರಿದ್ದ ಪಿಐಎಲ್‌ ಹಿಂಪಡೆದ ಶ್ರೀರಾಮ ಸೇನೆ

ಮೊದಲಿಗೆ ಅರ್ಜಿದಾರರು ತಮ್ಮ ಅಹವಾಲುಗಳನ್ನು ಒಳಗೊಂಡ ಮನವಿಯನ್ನು ತುರ್ತಾಗಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಸಕ್ಷಮ ಪ್ರಾಧಿಕಾರವು ಅಷ್ಟೇ ವೇಗವಾಗಿ ಮನವಿಯ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಹೇಳಿ ಮನವಿ ಹಿಂಪಡೆಯಲು ಅನುಮತಿಸಿದ ನ್ಯಾಯಾಲಯ.

Bar & Bench

ಲಂಚ ಹಗರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಅಥವಾ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಚಾರಣೆಗೆ ವಹಿಸಬೇಕು. ಇದರಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಆಕ್ಷೇಪಿಸಿ ಶ್ರೀರಾಮ ಸೇನೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆದಿದೆ.

ಶ್ರೀರಾಮಸೇನೆಯ ದಾವಣಗೆರೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ ಮಣಿಕಂಠ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಮೊದಲಿಗೆ ಅರ್ಜಿದಾರರು ತಮ್ಮ ಅಹವಾಲುಗಳನ್ನು ಒಳಗೊಂಡ ಮನವಿಯನ್ನು ತುರ್ತಾಗಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಸಕ್ಷಮ ಪ್ರಾಧಿಕಾರವು ಅಷ್ಟೇ ವೇಗವಾಗಿ ಮನವಿಯ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಹೇಳಿ ಅರ್ಜಿದಾ0ರರಿಗೆ ಮನವಿ ಹಿಂಪಡೆಯಲು ನ್ಯಾಯಾಲಯವು ಅನುಮತಿಸಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ಪ್ರಕರಣ ಗಂಭಿರವಾಗಿದೆ. ತನಿಖಾಧಿಕಾರಿ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಇಲ್ಲಿ ದೊಡ್ಡ ಹಗರಣ ನಡೆದಿದೆ. ಹೀಗಾಗಿ, ಈ ಪ್ರಕರಣದ ವಿಚಾರಣೆಯನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸಬೇಕು” ಎಂದು ಕೋರಿದರು.

ಇದಕ್ಕೆ ನ್ಯಾಯಾಲಯವು “ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕಾದರೆ ಸ್ಥಳೀಯ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬುದಕ್ಕೆ ಕಾರಣ ತೋರಿಸಿ. ಅಲ್ಲದೇ, ತನಿಖೆ ಸರಿಯಾದ ದಿಕ್ಕಿನಿಲ್ಲಿ ನಡೆಯುತ್ತಿಲ್ಲ ಎಂದಾದರೆ ನೀವು ಉನ್ನತ ಪ್ರಾಧಿಕಾರವನ್ನು ಸಂಪರ್ಕಿಸಿ ಅವರ ಗಮನಕ್ಕೆ ವಿಚಾರ ತರಬೇಕು” ಎಂದಿತು.

ಅಲ್ಲದೇ, “ಒಬ್ಬರು ತನಿಖಾಧಿಕಾರಿಯನ್ನು ವರ್ಗಾವಣೆ ಮಾಡಿದ ಕೂಡಲೇ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಲಾಗದು. ಅರ್ಜಿಯಲ್ಲಿ ಉಲ್ಲೇಖಿಸಿದ ಅಂಶಗಳ ಬಗ್ಗೆ ನ್ಯಾಯಾಲಯಕ್ಕೆ ತೃಪ್ತಿ ಇಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಲಾಗುವುದು. ತನಿಖೆಯಲ್ಲಿ ಲೋಪವಾಗಿದ್ದರೆ, ಆ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬೇಕು. ಈ ಕುರಿತು ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಅರ್ಜಿದಾರರು ಮೊದಲು ಅದನ್ನು ಪಾಲಿಸಬೇಕು. ಸಕ್ರಮ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಿರುವ ಬಗ್ಗೆ ನ್ಯಾಯಾಲಯಕ್ಕೆ ದಾಖಲೆ ತೋರಿಸಿ” ಎಂದು ಪೀಠ ಅರ್ಜಿದಾರರ ವಕೀಲರಿಗೆ ಪ್ರಶ್ನಿಸಿತು. ‌

ಆಗ ಅರ್ಜಿದಾರರ ಪರ ವಕೀಲರು “ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗುವುದು. ಹೀಗಾಗಿ, ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಡಬೇಕು” ಎಂದು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಅರ್ಜಿ ವಿಲೇವಾರಿ ಮಾಡಿತು.