ರಾಜ್ಯ ಮುಕ್ತ ಶಾಲಾ ವ್ಯವಸ್ಥೆಯಡಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಮಾದರಿಯಲ್ಲಿ ಒಂಭತ್ತು ದಿನಗಳ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಮನವಿದಾರರಿಗೆ ಪರಿಹಾರ ನೀಡಲು ಸೋಮವಾರ ಕರ್ನಾಟಕ ಹೈಕೋರ್ಟ್ ನಿರಾಕರಿಸಿತು.
ಸಾಂಕ್ರಾಮಿಕದ ಸಂದರ್ಭದಲ್ಲೂ ಸಾಮಾನ್ಯ ಮಾದರಿಯ ಪರೀಕ್ಷೆಯಲ್ಲಿ ಮುಕ್ತ ಶಾಲಾ ವ್ಯವಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂಬುದು ಅವರ ಅಂಕಪಟ್ಟಿಯಲ್ಲಿ ಕಾಣುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳ ಮನದಲ್ಲಿನ ಭಾವನೆಗಳು ತಣಿಯಲಿವೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಪಿ ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
“26/07/2021 ರಿಂದ 4/08/2021ರ ಸಂದರ್ಭದಲ್ಲಿ ಸಾಮಾನ್ಯ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಕ್ತ ಶಾಲಾ ವ್ಯವಸ್ಥೆಯ ವಿದ್ಯಾರ್ಥಿಗಳು ಬರೆದಿದ್ದಾರೆ ಎಂಬುದು ಅವರ ಅಂಕಪಟ್ಟಿಯಲ್ಲಿ ಕಾಣವಂತಾಗಬೇಕು. ಇದು ಅವರ ಭಾವನೆಗಳನ್ನು ತಣಿಸಲಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲೂ ಅವರು ಪರೀಕ್ಷೆ ಬರೆದಿದ್ದಾರೆ ಎಂಬುದನ್ನು ಗುರುತಿಸಿದಂತಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರ ಪುನೀತ್ ಆಚಾರ್ಯ ಪಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಪಿ ಮನೋಹರ್ ಅವರು “ಸಾಮಾನ್ಯ ಮತ್ತು ಮುಕ್ತ ಶಾಲಾ ವಿದ್ಯಾರ್ಥಿಗಳ ನಡುವೆ ರಾಜ್ಯ ಸರ್ಕಾರ ತಾರತಮ್ಯದ ನಿಲುವು ಕೈಗೊಂಡಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ತಲಾ ಮೂರು ತಾಸಿನಂತೆ ಎರಡು ದಿನ ಮಾತ್ರ ಪರೀಕ್ಷೆ ನಡೆಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕೋವಿಡ್ ತಗುಲುವುದರಿಂದ ಎಚ್ಚರಿಕೆ ವಹಿಸಲಾಗಿದೆ. ಆದರೆ, ಮುಕ್ತ ಶಾಲಾ ವ್ಯವಸ್ಥೆಯ ವಿದ್ಯಾರ್ಥಿಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗಿದ್ದು, ಅವರು ಕಡ್ಡಾಯವಾಗಿ ತಲಾ ಮೂರು ತಾಸುಗಳಂತೆ ಒಂಭತ್ತು ದಿನಗಳ ಅವಧಿಯಲ್ಲಿ ಪರೀಕ್ಷೆಯಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ” ಎಂದು ವಾದಿಸಿದರು.
“ಇಂದು (ಸೋಮವಾರ) ಪರೀಕ್ಷೆ ಆರಂಭವಾಗಿದ್ದರೂ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸಿದೇ ಸಾಮಾನ್ಯ ವಿದ್ಯಾರ್ಥಿಗಳಿಗೆ ನಡೆಸಲಾಗುವ ರೀತಿಯಲ್ಲಿಯೇ ಪರೀಕ್ಷೆ ನಡೆಸಲಾಗುತ್ತಿದೆ” ಎಂದು ತಗಾದೆ ಎತ್ತಿದರು.
ಎರಡು ಪ್ರತ್ಯೇಕ ವಿಭಾಗಗಳಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯತ್ತ ಬೆರಳು ಮಾಡಿದ ಸರ್ಕಾರವು ಅರ್ಜಿಗೆ ವಿರೋಧ ವ್ಯಕ್ತಪಡಿಸಿತು. ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕುರಿತು ತಜ್ಞರಿಂದ ಸಲಹೆ ಪಡೆಯಲಾಗಿದೆ. ಇದರ ಆಧಾರದಲ್ಲಿ ಸಾಮಾನ್ಯ ಮತ್ತು ಮುಕ್ತ ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ರೀತಿಯಲ್ಲಿ ಪರೀಕ್ಷೆ ನಡೆಸುವ ನಿರ್ಧಾರ ಮಾಡಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ಆರಂಭವಾಗಿದ್ದು, ಇಲಾಖೆಯ ನೀತಿಯ ನಿರ್ಧಾರವಾಗಿರುವುದರಿಂದ ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಸರ್ಕಾರ ಸಮರ್ಥಿಸಿತು. ಪರೀಕ್ಷೆ ನಡೆಸುವ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಪೀಠಕ್ಕೆ ಸರ್ಕಾರ ಮಾಹಿತಿ ನೀಡಿತು.
ಜುಲೈ 5ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಪೀಠವು ಸೋಮವಾರದಿಂದ ಪರೀಕ್ಷೆ ಆರಂಭವಾಗಿದ್ದು, ಕೇವಲ 2,683 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯದ 15 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಕುಳಿತು ಪರೀಕ್ಷೆ ಬರೆಯಲಿದ್ದಾರೆ ಎಂಬುದನ್ನು ಗುರುತಿಸಿತು.
“ಪರೀಕ್ಷೆ ನಡೆಸುವ ಉದ್ದೇಶದಿಂದ ಜಾರಿ ಮಾಡಲಾಗಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ ಎಂಬುದರ ಬಗ್ಗೆ ನಮಗೆ ಸಮಾಧಾನವಿದೆ. ಕೋವಿಡ್ ಹರಡುವ ಸರಾಸರಿಯು ಕ್ಷೀಣಿಸಿರುವುದರಿಂದ ಸೋಂಕು ಇದ್ದರೂ ಪರೀಕ್ಷೆ ನಡೆಸಲು ಇದು ಸಕಾಲ ಎಂದು ನಮಗನ್ನಿಸಿದೆ” ಎಂದು ಪೀಠ ಹೇಳಿದ್ದು, ತುರ್ತಾಗಿ ಫಲಿತಾಂಶ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.