Karnataka High Court 
ಸುದ್ದಿಗಳು

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಮುದ್ರಣ ದೋಷಕ್ಕೆ ನಿರುದ್ಯೋಗಿ ಅಭ್ಯರ್ಥಿ ಬಲಿಯಾಗಬಾರದು: ಹೈಕೋರ್ಟ್

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭ್ಯರ್ಥಿಯ ಉದ್ಯೋಗಾವಕಾಶ ಕಸಿದುಕೊಳ್ಳುವಂತಿಲ್ಲ; ಎಂಟು ವಾರಗಳಲ್ಲಿ ಅಬಕಾರಿ ರಕ್ಷಕ ಹುದ್ದೆ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ.

Bar & Bench

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಅಧಿಕಾರಿಗಳಿಂದಾದ ಮುದ್ರಣ ದೋಷಕ್ಕೆ ಯಾವುದೇ ಅರ್ಹ ನಿರುದ್ಯೋಗಿ ಅಭ್ಯರ್ಥಿ ಬಲಿಪಶುವಾಗಬಾರದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) 2018ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್ ಮತ್ತು ಚಿಲ್ಲಕೂರ ಸುಮಲತಾ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಅಭ್ಯರ್ಥಿ ಕೆ ಮಂಜುನಾಥ ಅವರಿಗೆ ಎಂಟು ವಾರಗಳೊಳಗೆ ಅಬಕಾರಿ ರಕ್ಷಕ ಹುದ್ದೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.

“ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಯೇ ಇಂದಿನ ಅಗತ್ಯ ಮತ್ತು ವಿಕಸಿತ ಭಾರತದ ಆಶಯವಾಗಿದೆ” ಎಂದು ಪೀಠ ತಿಳಿಸಿದೆ.

ಶಾಲಾ ದಾಖಲೆಗಳಲ್ಲಿ ಅಧಿಕಾರಿಗಳು ಮಾಡುವ ತಪ್ಪುಗಳಿಗೆ ವಿದ್ಯಾರ್ಥಿಗಳು ಅಥವಾ ಪೋಷಕರು ಹೊಣೆಗಾರರಾಗುವುದಿಲ್ಲ. ಆಡಳಿತಾತ್ಮಕ ನಿರ್ಲಕ್ಷ್ಯದಿಂದ ನಿರುದ್ಯೋಗಿಯೊಬ್ಬ ತನ್ನ ಜೀವನೋಪಾಯವನ್ನು ಕಳೆದುಕೊಳ್ಳುವಂತಾಗಬಾರದು ಎಂದು ನ್ಯಾಯಾಲಯ ಹೇಳಿದೆ.

ಜನ್ಮ ದಿನಾಂಕದ ಪುರಾವೆಯಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ (ಟಿಸಿ) ಅಥವಾ ಇತರ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು. ಹೀಗಿರುವಾಗ, ಸರಿಯಾದ ಜನ್ಮ ದಿನಾಂಕ ನಮೂದಾಗಿದ್ದ ಟಿಸಿಯನ್ನು ಪರಿಗಣಿಸದೆ ಕೆಪಿಎಸ್‌ಸಿ ತಪ್ಪು ಮಾಡಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಅಧಿಕಾರಿಯೊಬ್ಬರು ಮಾಡಿದ ತಪ್ಪನ್ನು ಮುಂದಿಟ್ಟುಕೊಂಡು ಸರ್ಕಾರವು ಅಭ್ಯರ್ಥಿಯ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಅಬಕಾರಿ ರಕ್ಷಕ (ಪುರುಷ) ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ 2008ರಲ್ಲಿ ಅಧಿಸೂಚನೆ ಹೊರಡಿಸಿತ್ತು. ತುಮಕೂರು ತಾಲ್ಲೂಕಿನ ಕಳ್ಳಿಪಾಳ್ಯದ ಕೆ ಮಂಜುನಾಥ ಅವರು ಪರಿಶಿಷ್ಟ ಜಾತಿ-ಕನ್ನಡ ಮಾಧ್ಯಮ ವಿಭಾಗದಲ್ಲಿ ಸ್ಪರ್ಧಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 231 ಅಂಕ ಗಳಿಸಿದ್ದರು.

ಮೂಲ ದಾಖಲೆಗಳ ಪರಿಶೀಲನೆ ವೇಳೆ ಮಂಜುನಾಥ ಅವರ ವರ್ಗಾವಣೆ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳಲ್ಲಿ ಜನ್ಮ ದಿನಾಂಕವನ್ನು 1982ರ ಜೂನ್ 15 ಎಂದು ನಮೂದಿಸಲಾಗಿತ್ತು. ಆದರೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ 1980ರ ಜೂನ್ 15 ಎಂದು ದಾಖಲಾಗಿತ್ತು.

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಮುದ್ರಣ ದೋಷದಿಂದ ಜನ್ಮ ದಿನಾಂಕ ತಪ್ಪಾಗಿ ನಮೂದಾಗಿದೆ ಎಂದು ಮಂಜುನಾಥ ಅವರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಿದ ಅಂಕಪಟ್ಟಿ ಸಲ್ಲಿಸಲು ಅವರಿಗೆ ಕಾಲಾವಕಾಶ ನೀಡಲಾಗಿತ್ತು.

ಆದರೆ, ನಿಗದಿತ ಅವಧಿಯಲ್ಲಿ ತಿದ್ದುಪಡಿ ದಾಖಲೆ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ, ಮಂಜುನಾಥ ಅವರಿಗಿಂತ ಕಡಿಮೆ ಅಂಕ ಗಳಿಸಿದ್ದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು.

ಇದರಿಂದ ಅನ್ಯಾಯಕ್ಕೊಳಗಾದ ಮಂಜುನಾಥ ಅವರು ಕೆಪಿಎಸ್‌ಸಿಯ ಕ್ರಮ ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ, ಮಂಜುನಾಥ ಅವರಿಗೆ ಅಬಕಾರಿ ರಕ್ಷಕ ಹುದ್ದೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಕೆಎಟಿಯ ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಮಂಜುನಾಥ ಅವರಿಗೆ ಎಂಟು ವಾರಗಳಲ್ಲಿ ನೇಮಕಾತಿ ನೀಡುವಂತೆ ಆದೇಶಿಸಿದೆ.