KSCA, RCB, DNA Entrainment Networks & Karnataka HC 
ಸುದ್ದಿಗಳು

ಕಾಲ್ತುಳಿತ ಪ್ರಕರಣ: ಜನಸಂದಣಿ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಎಸ್‌ಒಪಿ ಮಾಹಿತಿ ಕೇಳಿದ ಹೈಕೋರ್ಟ್‌

“ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆಯೇ ಮತ್ತು ಇಂಥ ಘಟನೆ ಮುಂದೆ ನಡೆಯದಂತೆ ತಡೆಯಲು ಯಾವ ರೀತಿಯ ಶಿಷ್ಟಾಚಾರ ಇದೆ ಎಂಬುದನ್ನು ನೋಡಲಾಗುವುದು” ಎಂದ ನ್ಯಾಯಾಲಯ.

Bar & Bench

ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅನುಮತಿಸಿದೆ.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “11 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದ್ದು, ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆಯೇ ಮತ್ತು ಇಂಥ ಘಟನೆ ಮುಂದೆ ನಡೆಯದಂತೆ ತಡೆಯಲು ಯಾವ ರೀತಿಯ ಶಿಷ್ಟಾಚಾರ ಇದೆ ಎಂಬುದನ್ನು ನೋಡಲಾಗುವುದು” ಎಂದಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಚಿನ್ನಸ್ವಾಮಿ ಕ್ರೀಡಾಂಗಣವು 35,000 ಮಂದಿಗೆ ಮಾತ್ರವೇ ಸ್ಥಳಾವಕಾಶ ಹೊಂದಿದೆ. ಆದರೆ, 3 ಲಕ್ಷ ಮಂದಿ ನೆರೆದಿದ್ದರು. ಜನಸಂದಣಿ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಎಸ್‌ಒಪಿ ಸಲ್ಲಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸಲಹೆಯನ್ನೂ ನೀಡಬಹುದಾಗಿದೆ” ಎಂದರು.

ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪರ ಹಿರಿಯ ವಕೀಲ ಬಿ ಕೆ ಸಂಪತ್‌ ಕುಮಾರ್‌ ಅವರು “ನ್ಯಾ. ಕುನ್ಹಾ ಆಯೋಗವು 15 ದಿನಗಳ ಹಿಂದೆಯೇ ವರದಿ ಸಲ್ಲಿಸಿದ್ದರೂ ಅದನ್ನು ತಮಗೆ ನೀಡಲಾಗಿಲ್ಲ. ಡಿಎನ್‌ಎ ಅಧಿಕಾರಿಗಳ ಘನತೆಗೆ ಪ್ರತಿದಿನ ಚ್ಯುತಿ ಉಂಟಾಗುತ್ತಿದೆ. ಮಾಧ್ಯಮಗಳು ಹೆಸರು ಉಲ್ಲೇಖಿಸಿ, ಅಮಾನಿಸುತ್ತಿವೆ” ಎಂದರು.

ಅಮಿಕಸ್‌ ಕ್ಯೂರಿ ಎಸ್‌ ಸುಶೀಲಾ ಅವರು “2014ರಿಂದಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯು ಜನಸಂದಣಿ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿದೆ. ಸರ್ಕಾರ ಅದರಲ್ಲಿ ಸುಧಾರಣೆ ಮಾಡಬಹುದು. ಮುಂದೆ ಇಂಥ ಘಟನೆಗಳು ನಡೆಯಬಾರದು ಎಂಬುದು ನಮ್ಮ ಉದ್ದೇಶವಾಗಿದೆ” ಎಂದರು.

ಈ ಹಂತದಲ್ಲಿ ಪೀಠವು ಹರಿದ್ವಾರದ ಮಾನಸ ದೇವಿ ದೇವಾಲಯದಲ್ಲಿ ಘಟಿಸಿರುವ ಕಾಲ್ತುಳಿತ ಪ್ರಕರಣವನ್ನು ಪ್ರಸ್ತಾಪಿಸಿ, ಮುಂಜಾಗ್ರತಾ ಕ್ರಮ ಅಗತ್ಯವಾಗಿದೆ ಎಂದಿತು. ಅಲ್ಲದೇ, ಕಾರ್ಯಕ್ರಮ ಆಯೋಜಕರು ಪೊಲೀಸರಿಂದ ಅನುಮತಿ ಪಡೆಯಬೇಕು. ಪೊಲೀಸ್‌ ಇಲಾಖೆಯೂ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥೆ ಹೊಂದಬೇಕು. ಪ್ರತಿಯೊಂದು ಕಾರ್ಯಕ್ರಮದಲ್ಲಿ ಜನಸಂದಣಿ ನಿಯಂತ್ರಿಸುವ ರೀತಿ ಬೇರೆಯದೇ ಆಗಿರುತ್ತದೆ. ಇದನ್ನು ಪರಿಶೀಲಿಸಿ, ತಜ್ಞರು ಅಥವಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಲಹೆ ಪಡೆಯಬೇಕು ಎಂದಿತು.

ಈ ವೇಳೆ ಹಿರಿಯ ವಕೀಲ ಎಂ ಬಿ ನರಗುಂದ್‌ ಅವರು “ಅಧಿಕೃತ ಆಕ್ಷೇಪಣೆ, ಆಯೋಗದ ವರದಿ, ಅಮಿಕಸ್‌ ವರದಿ ನೀಡಲು ಆದೇಶಿಸಬೇಕು” ಎಂದು ಕೋರಿದರು. ಇದಕ್ಕೆ ಪೀಠವು “ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದ್ದು, ಇಲ್ಲಿ ಮುಚ್ಚಿದ ಲಕೋಟೆ ಇರುವುದಿಲ್ಲ. ಎಲ್ಲವೂ ದಾಖಲೆಯ ಭಾಗವಾಗಿದೆ. ಜನಸಂದಣಿ ನಿಯಂತ್ರಿಸುವ ವಿಚಾರದಲ್ಲಿ ಅರ್ಜಿದಾರರಿಗೆ ವಿಶೇಷ ತಜ್ಞತೆ ಇದೆಯೇ” ಎಂದು ಪ್ರಶ್ನಿಸಿ, ಅರ್ಜಿದಾರರ ಮಧ್ಯಪ್ರವೇಶಕ್ಕೆ ನಿರಾಕರಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿತು.