ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಮಾಣೀಕೃತ ಕಾರ್ಯವಿಧಾನದ (ಎಸ್‌ಒಪಿ) ಪ್ರಮುಖ ಅಂಶಗಳನ್ನು ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯಲ್ಲಿ ಸೇರ್ಪಡೆ ಮಾಡುವ ಸಲಹೆ ಕುರಿತು ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.
ಅಮಿಕಸ್ ಕ್ಯೂರಿಯಾದ ಹಿರಿಯ ವಕೀಲೆ ಎಸ್ ಸುಶೀಲಾ ಅವರು “1.9.2025ರಂದು ಸರ್ಕಾರ ಎಸ್‌ಒಪಿ ರೂಪಿಸಿದ್ದು, ನಮಗೆ ಸಲಹೆ ನೀಡಲು ಕೋರಲಾಗಿತ್ತು. 3.11.2025ರಂದು ನಾವು ನಮ್ಮ ಸಲಹೆ ನೀಡಿದ್ದೇವೆ. 26.11.2025ರಂದು ಮತ್ತೆ ಹೆಚ್ಚುವರಿಯಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದೆಲ್ಲವನ್ನೂ ಅಡಕಗೊಳಿಸಿ 13.1.2026ರಂದು ರಾಜ್ಯ ಸರ್ಕಾರವು ಪರಿಷ್ಕೃತ ಎಸ್‌ಒಪಿ ರೂಪಿಸಿದೆ. ಈ ಮಧ್ಯೆ. 20.8.2025ರಂದು ರಾಜ್ಯ ಸರ್ಕಾರವು ಜನಸಂದಣಿ ನಿಯಂತ್ರಣಕ್ಕೆ ಮಸೂದೆ ರೂಪಿಸಿದ್ದು, ಅದು ಸದನ ಸಮಿತಿಯ ಪರಿಗಣನೆಯಲ್ಲಿದೆ. ಮಸೂದೆಗೆ ಹೋಲಿಕೆ ಮಾಡಿದರೆ ಎಸ್‌ಒಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಇಲ್ಲಿನ ಅಂಶಗಳನ್ನು ಅಲ್ಲಿ ಅಡಕಗೊಳಿಸಿದರೆ ಒಳ್ಳೆಯದು” ಎಂದರು.
ಮುಂದುವರಿದು, “ಆರ್‌ಸಿಬಿಯು ಮುಂದಿನ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಇಲ್ಲಿ ನಡೆಸಲು ಬಯಸಿದೆ ಎನ್ನಲಾಗಿದೆ. ಅದಕ್ಕೂ ಮುನ್ನ ಎಸ್‌ಒಪಿಯನ್ನು ಜಾರಿಗೊಳಿಸಬೇಕು. ಏನಾಗುತ್ತದೆ ಎಂಬುದನ್ನು ಇಡೀ ದೇಶ ಬೆರಗುಗಣ್ಣಿನಿಂದ ನೋಡುತ್ತಿದೆ” ಎಂದರು.
ಹಿರಿಯ ವಕೀಲ ಸಿ ಕೆ ನಂದಕುಮಾರ್ ಅವರು “ಎಸ್‌ಒಪಿ ಮತ್ತು ಕಾಯಿದೆಯು ವಿಭಿನ್ನ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಎಲ್ಲರೂ ಸಮಾನ ಉದ್ದೇಶಕ್ಕಾಗಿ ಕೆಲಸ ಮಾಡಬೇಕು” ಎಂದರು.
ಆಗ ಪೀಠವು “ಎಸ್‌ಒಪಿಯಲ್ಲಿ ಸೂಚಿಸಿರುವ ಕೆಲವು ಕ್ರಮಗಳನ್ನು ಮಸೂದೆಯಲ್ಲಿ ಅಡಕಗೊಳಿಸಬೇಕು. ಒಂದೊಮ್ಮೆ ಮಸೂದೆ ಕಾಯಿದೆಯಾದರೂ ಎಸ್‌ಒಪಿಯನ್ನು ಯಾವಾಗಬೇಕಾದರೂ ಜಾರಿಗೊಳಿಸಬಹುದು. ಹೇಗೆ ಮುನ್ನಡೆಯಲು ಬಯಸುತ್ತೀರಿ” ಎಂದು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.
ಅಡ್ವೊಕೇಟ್ ಜನರಲ್ ಸೋಮವಾರ ವಿಚಾರಣೆಯಲ್ಲಿ ಭಾಗಿಯಾಗಲಿದ್ದು, ಕಾಲವಕಾಶ ನೀಡಬೇಕು ಎಂದು ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಬರ್ ಕೋರಿದರು. ಇದನ್ನು ಆಲಿಸಿದ ಪೀಠವು ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಎಸ್‌ಒಪಿಯ ಪ್ರಮುಖ ಅಂಶಗಳನ್ನು ಸೇರಿಸುವ ಸಲಹೆ ಕುರಿತಿ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು.
ಈ ಮಧ್ಯೆ, ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದನ್ನು ಸರಿಪಡಿಸುವ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ಪರಿಗಣಿಸಬೇಕು ಎಂದು ವಕೀಲ ರಮೇಶ್ ನಾಯ್ಕ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಇಲ್ಲಿ ಪರಿಗಣಿಸಲಾಗದು ಎಂದು ನ್ಯಾಯಾಲಯ ವಜಾಗೊಳಿಸಿತು.