ಸುದ್ದಿಗಳು

ವೃತ್ತಿಯ ಆರಂಭದ ದಿನಗಳಲ್ಲಿ ಕಾರಿನ ಡಿಕ್ಕಿಯನ್ನೇ ಕಚೇರಿ ಮಾಡಿಕೊಂಡಿದ್ದರು ನ್ಯಾ. ಹಿಮಾ ಕೊಹ್ಲಿ

ಮಹಿಳಾ ವಕೀಲರು ಎಲ್ಲಾ ಅಡೆತಡೆಗಳನ್ನು ಮೀರಬೇಕು ಎಂದು ನ್ಯಾ. ಕೊಹ್ಲಿ ಕರೆ ನೀಡಿದರು.

Bar & Bench

ಮಹಿಳೆಯರು ವಕೀಲ ವೃತ್ತಿ ಪ್ರವೇಶಿಸಲು ಸೂಕ್ತ ಸಮಯ ಎಂಬುದು ಎಂದಿಗೂ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮಂಗಳವಾರ ತಿಳಿಸಿದ್ದು ಎಲ್ಲಾ ಅಡೆತಡೆಗಳನ್ನು ಮಹಿಳಾ ವಕೀಲರು ಮೀರಬೇಕು ಎಂದು ಕರೆ ನೀಡಿದ್ದಾರೆ.

ತಮಗೆ ಸುಪ್ರೀಂಕೋರ್ಟ್‌ಗೆ ಪದೋನ್ನತಿ ನೀಡಿದ ಹಿನ್ನೆಲೆಯಲ್ಲಿ 'ವುಮೆನ್ ಇನ್ ಲಾ ಅಂಡ್ ಲಿಟಿಗೇಷನ್' (ವಿಲ್) ಸಂಘಟನೆ ವತಿಯಿಂದ ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

"ಮಹಿಳೆಯರು ವಕೀಲ ವೃತ್ತಿ ಪ್ರವೇಶಿಸಲು ಸೂಕ್ತ ಸಮಯ ಎಂಬುದು ಇರುವುದಿಲ್ಲ... ನಾನು ನನ್ನ ವೃತ್ತಿ ಜೀವನವನ್ನು ಕಾರಿನ ಲಗೇಜ್‌ ಇಡುವ ಜಾಗದಲ್ಲಿ (ಡಿಕ್ಕಿ) ಕಚೇರಿ ತೆರೆಯುವ ಮೂಲಕ ಆರಂಭಿಸಿದೆ. ಎಲ್ಲ ಅಡೆತಡೆಗಳನ್ನು ಮೀರಬೇಕಿದೆ. ಅಡ್ಡಿ ಆತಂಕಗಳನ್ನು ಹೋಗಲಾಡಿಸಬೇಕಿದೆ" ಎಂದು ಅವರು ಹೇಳಿದರು.

ಔತಣಕೂಟವೊಂದರಲ್ಲಿ 'ವುಮೆನ್ ಇನ್ ಲಾ ಅಂಡ್ ಲಿಟಿಗೇಷನ್'ಸಂಘಟನೆಯ ಪರಿಕಲ್ಪನೆಗಳು ರೂಪುಗೊಂಡ ಬಗೆಯನ್ನು ಕೂಡ ಅವರು ಇದೇ ಸಂದರ್ಭದಲ್ಲಿ ವಿವರಿಸಿದರು. "ನಾವು ಪರಸ್ಪರ ಹಂಚಿಕೊಳ್ಳಲು ಹಾಗೂ ಉಳಿದ ಮಹಿಳಾ ಕಾನೂನು ವೃತ್ತಿಪರರಿಗೆ ಸಹಾಯ ಮಾಡಲು ಹಲವು ವಿಷಯಗಳಿವೆ ಎಂದು ಭಾವಿಸುತ್ತೇವೆ. ಮಹಿಳೆಯರಿಗೆ ಸಹಾಯ ಮಾಡಲು ನಾವು ನಿರೀಕ್ಷೆಗೂ ಮೀರಿದ ಬೆಂಬಲದೊಂದಿಗೆ ಇಲ್ಲಿದ್ದೇವೆ" ಎಂದು ಅವರು ಹೇಳಿದರು.

ವಕೀಲೆಯರಿಗೆ ಯಾವುದೇ ಕ್ಲಬ್‌ ಅಥವಾ ಸಂಪರ್ಕತಾಣ ಇರುವುದಿಲ್ಲ ಎಂದು ತಿಳಿಸಿದ ನ್ಯಾ. ಕೊಹ್ಲಿ ʼಹೀಗಾಗಿ ಕೆಲವೇ ಕೆಲವು ಮಹಿಳೆಯರು ಇಲ್ಲಿ ಉಳಿಯಲು ಶಕ್ತರಾಗಿದ್ದಾರೆʼ ಎಂದು ಅಭಿಪ್ರಾಯಪಟ್ಟರು.

"ವಕೀಲರಾಗಿ ಎಂದು ಮುಜುಗರಪಡಬೇಡಿ. ಎಲ್ಲರನ್ನೂ ಮರದ ದಿಮ್ಮಿಗಳಂತೆ ಪರಿಗಣಿಸಿ, ಪೀಠದ ಮುಂದೆ ವಾದ ಮಾಡಿ. ಯಾವಾಗಲೂ ತಯಾರಾಗಿರಿ ಮತ್ತು ನೀವು ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಭಾವ ಮೂಡಿಸಬೇಡಿ. ನ್ಯಾಯಾಲಯದಲ್ಲಿ ಆಕ್ರಮಣಶೀಲತೆ ಇರಿಸಿಕೊಳ್ಳಿ ಆದರೆ ಅದನ್ನುಮನೆಗೆ ಒಯ್ಯದಿರಿ” ಎಂದು ಕಿವಿಮಾತು ಹೇಳಿದರು.

ನ್ಯಾಯಮೂರ್ತಿ ದಿನಗಳ ಅನುಭವಗಳನ್ನು ಅವರು ವಿವರಿಸಿದ್ದು ಹೀಗೆ: ನ್ಯಾಯಮೂರ್ತಿಗಳದ್ದು ಏಕಾಂಗಿ ಜೀವನ. ಇದು ಬಟ್ಟಲಲ್ಲಿಟ್ಟ ಗೋಲ್ಡ್‌ಫಿಶ್‌ ರೀತಿ. ನಿಮಗೆ ಕ್ಷುಲ್ಲಕವೆನಿಸಿದ್ದೇನಾದರೂ ಕಂಡುಬಂದರೆ ಅದನ್ನು ನಿಮ್ಮ ಮನೆಯ ನಾಲ್ಕುಗೋಡೆಗಳ ಮಧ್ಯೆ ಇರಿಸಿಕೊಳ್ಳಬೇಕು. ನೀವು ಇಡೀ ವ್ಯವಸ್ಥೆಯನ್ನು ಸಂಕೇತಿಸುತ್ತಾ ಇರುತ್ತೀರಿ ಮತ್ತು ಖಾಸಗಿಯಾದದ್ದು ಏನೇ ಇದ್ದರೂ ಅದು ಖಾಸಗಿಯಾಗಿ ಉಳಿಯಬೇಕು” ಎಂದರು.

ನ್ಯಾಯಮೂರ್ತಿ ಕೊಹ್ಲಿ ಅವರು ಹುಟ್ಟಿ ಬೆಳೆದದ್ದು ನವದೆಹಲಿಯಲ್ಲಿ. ಅವರು ಮೇ 29, 2006 ರಂದು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಆಗಸ್ಟ್ 29, 2007 ರಂದು ಖಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು 2021ರ ಜನವರಿ 7ರಂದು ತೆಲಂಗಾಣ ಹೈಕೋರ್ಟ್‌ನ ಪ್ರಪ್ರಥಮ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದರು. ಬಳಿಕ ಆಗಸ್ಟ್ 31, 2021ರಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಬೇಲಾ ಎಂ ತ್ರಿವೇದಿ ಅವರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಅಭಿನಂದನಾ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಪ್ರತಿಭಾ ಸಿಂಗ್, ರೇಖಾ ಪಲ್ಲಿ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಹಿರಿಯ ನ್ಯಾಯವಾದಿ ಮಣಿಂದರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.