ರಾಜ್ಯ ಸರ್ಕಾರವು ಟೆಂಡರ್ ಆಹ್ವಾನಕ್ಕೆ ತನ್ನದೇ ಆದ ಷರತ್ತುಗಳನ್ನು ವಿಧಿಸಬಹುದಾಗಿದ್ದು, ಅದು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಮಹತ್ವದ ಆದೇಶ ಮಾಡಿದೆ.
ತಾನು ಅತಿ ಹೆಚ್ಚು ಬಿಡ್ ಕೂಗಿದ್ದು, ನಿರುದ್ಯೋಗಿಯಾದ ಬಡ ಪರಿಶಿಷ್ಟ ಜಾತಿಗೆ ಸೇರಿದವನಾದ ತನಗೆ ಸಾರ್ವಜನಿಕ ಸ್ಥಳದಲ್ಲಿ ಉದ್ಯಮ ನಡೆಸುವವರಿಂದ ದಿನನಿತ್ಯ ಮತ್ತು ಮಾಸಿಕ ಶುಲ್ಕ ಸಂಗ್ರಹಿಸುವ ಟೆಂಡರ್ ನೀಡಬೇಕು ಎಂದು ಬೆಳಗಾವಿಯ ಹಾರೂಗೇರಿ ಪುರಸಭೆಗೆ ಮನವಿ ಮಾಡಿದ್ದ 43 ವರ್ಷದ ಅಪ್ಪಾ ಸಾಬ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
ಸಾರ್ವಜನಿಕ ಸ್ಥಳ ಮತ್ತು ಶೌಚಾಲಯ ಬಳಕೆಗೆ ಪ್ರತಿದಿನ ಮತ್ತು ವಾರದ ಶುಲ್ಕ ಸಂಗ್ರಹಿಸಲು ₹12,40,300 ಬಿಡ್ ಮೊತ್ತ ನಿಗದಿ ಮಾಡಿ ಹಾರೂಗೇರಿ ಪುರಸಭೆಯು ಸಾರ್ವಜನಿಕ ನೋಟಿಸ್ ನೀಡಿತ್ತು. ಆದರೆ, ಅರ್ಜಿದಾರರು ₹9,65,000 ಬಿಡ್ ಸಲ್ಲಿಸಿದ್ದು, ಅದನ್ನು ಒಪ್ಪಿಕೊಳ್ಳುವಂತೆ ಟೆಂಡರ್ ನೀಡಿರುವ ಪುರಸಭೆಗೆ ಒತ್ತಾಯ ಮಾಡಲಾಗದು ಎಂದು ನ್ಯಾಯಾಲಯ ಆದೇಶಿಸಿದೆ.
ಬಿಡ್ ತಿರಸ್ಕರಿಸಿರುವುದನ್ನು ತನಗೆ ತಿಳಿಸಿಲ್ಲ ಎಂಬ ಅರ್ಜಿದಾರರ ವಾದವು ಪುರಸಭೆಯ 13ನೇ ಷರತ್ತಿಗೆ ವಿರುದ್ಧವಾಗಿದೆ. ಟೆಂಡರ್ ಒಪ್ಪಿಕೊಳ್ಳುವ ಅಥವಾ ಮರು ಟೆಂಡರ್ ಕರೆಯುವ ಅಧಿಕಾರ ಪುರಸಭೆಗೆ ಇದೆ ಎಂದು 15ನೇ ಷರತ್ತಿನಲ್ಲಿ ಹೇಳಲಾಗಿದೆ. ಹೀಗಾಗಿ, ಅರ್ಜಿದಾರರ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.
ನಿರ್ಧಾರ ಕೈಗೊಂಡಿರುವ ಪ್ರಕ್ರಿಯೆಯು ಸಮರ್ಥನೀಯ, ತರ್ಕಬದ್ಧವಾಗಿದೆಯೇ ಅಥವಾ ಸ್ವೇಚ್ಛೆ ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬಹುದಾಗಿದೆ. ಸಂವಿಧಾನದ 226ನೇ ವಿಧಿಯಡಿ ವಿವೇಚನಾಧಿಕಾರ ಬಳಕೆ ಮಾಡುವಾಗ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕೆ ವಿನಾ ಕಾನೂನಿನ ಅಂಶವಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಪ್ರವೇಶದ ಅಗತ್ಯತೆಯನ್ನು ನ್ಯಾಯಾಲಯ ನಿರ್ಧರಿಸಬೇಕಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಬಿಡ್ಡರ್‌ಗಳು ಸಲ್ಲಿಸುವ ಮೊತ್ತವು ಪುರಸಭೆ ನಿರೀಕ್ಷೆಗೆ ತಕ್ಕಂತೆ ಇರದಿದ್ದರೆ ಮರು ಟೆಂಡರ್ ನಡೆಸುವ ಅಧಿಕಾರ ಪುರಸಭೆಗೆ ಇರಲಿದೆ ಎಂದು ಅರ್ಜಿಯಲ್ಲೇ ಹೇಳಲಾಗಿದೆ. ಅಲ್ಲದೇ, ಪುರಸಭೆ ನಿಗದಿಪಡಿಸಿರುವ ಮೊತ್ತಕ್ಕಿಂತಲೂ ಕಡಿಮೆ ಟೆಂಡರ್ ಮೊತ್ತ ಸಲ್ಲಿಸಿರುವುದಾಗಿ ಅರ್ಜಿದಾರರು ಹೇಳಿದ್ದಾರೆ. ಹೀಗಾಗಿ, ಅವರು ಹಕ್ಕು ಪ್ರತಿಪಾದನೆ ಮಾಡಲಾಗದು. ಟೆಂಡರ್ ಒಪ್ಪುವ ವಿಚಾರ ಪುರಸಭೆಯ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಹಾರೂಗೇರಿ ಪುರಸಭೆಯು ಟೆಂಡರ್ ಮೊತ್ತವು ಕನಿಷ್ಠ ₹12,40,300 ಇರಬೇಕು ಎಂದು ಹೇಳಿದೆ. ಆದರೆ, ಅರ್ಜಿದಾರ ₹9,65,000 ಮೊತ್ತದ ಮೂಲಕ ಅತಿ ಹೆಚ್ಚು ಬಿಡ್ ಕೂಗಿರುವುದು ತಾನೇ ಎಂದು ಹೇಳಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 2,75,300 ರೂಪಾಯಿ ನಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಹೊಸದಾಗಿ ಟೆಂಡರ್ ಕರೆಯಲು ನಿರ್ಧರಿಸುವುದರಿಂದ ಅರ್ಜಿದಾರರ ಹಕ್ಕು ಕಡಿತವಾಗುವುದಿಲ್ಲ. ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಜಿದಾರರು ಭಾಗವಹಿಸಬಹುದಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗದು. ಅಲ್ಲದೇ, ತಾನು ಕೂಗಿರುವ ಬಿಡ್ ಮೊತ್ತವನ್ನು ಒಪ್ಪಿಕೊಳ್ಳುವಂತೆ ಪುರಸಭೆಗೆ ನಿರ್ದೇಶಿಸಲಾಗದು ಎಂದು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಅರ್ಜಿದಾರರ ಪರವಾಗಿ ವಕೀಲ ಅಂಕಿತ್ ರಮೇಶ್ ದೇಸಾಯಿ ವಾದಿಸಿದರು.