30 ವರ್ಷಗಳಿಗಿಂತ ಹೆಚ್ಚುಕಾಲ ನಿರಂತರ ಸೇವೆ ಸಲ್ಲಿಸಿದ ತಾತ್ಕಾಲಿಕ ಉದ್ಯೋಗಿಗೆ ಪಿಂಚಣಿ ನಿರಾಕರಿಸಿರುವ ಗುಜರಾತ್ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತು [ಗುಜರಾತ್ ಸರ್ಕಾರ ಮತ್ತಿತರರು ಹಾಗೂ ತಾಲ್ಸಿಭಾಯಿ ಧಂಜಿಭಾಯ್ ಪಟೇಲ್ ನಡುವಣ ಪ್ರಕರಣ].
ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿತು.
30 ವರ್ಷಗಳಿಗಿಂತಲೂ ಹೆಚ್ಚು ಕಾಲ ತಾತ್ಕಾಲಿಕ ಉದ್ಯೋಗಿಯ ಸೇವೆ ಪಡೆದು ನಂತರ ಅವರು ತಾತ್ಕಾಲಿಕ ಉದ್ಯೋಗಿಯಾಗಿರುವುದರಿಂದ ಪಿಂಚಣಿ ಸೌಲಭ್ಯಕ್ಕೆ ಅರ್ಹರಲ್ಲ ಎಂದು ವಾದಿಸುವುದು ಅಸಮಂಜಸ ಎಂಬುದಾಗಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ನೌಕರನಿಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಕಲ್ಯಾಣರಾಜ್ಯವಾಗಿ, ಗುಜರಾತ್ ಇಂತಹ ನಿಲುವು ತೆಗೆದುಕೊಳ್ಳಬಾರದು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತು. ಅಂತೆಯೇ ಸರ್ಕಾರದ ಮನವಿಯನ್ನು ವಜಾಗೊಳಿಸಿದ ಪೀಠ, ಹೈಕೋರ್ಟ್ ನಿರ್ದೇಶನದಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟಿತು.