Karnataka HC and Justice Sachin Shankar Magadum 
ಸುದ್ದಿಗಳು

ಕಾಯಿದೆಯಾಗದ ಬೀಜಗಳ ಮಸೂದೆ ಅನ್ವಯ ಸಗಟು, ಚಿಲ್ಲರೆ, ಮಾರಾಟ, ವಿತರಕರಿಗೆ ಪರವಾನಗಿಗೆ ಒತ್ತಾಯಿಸುವಂತಿಲ್ಲ: ಹೈಕೋರ್ಟ್‌

ಬೀಜಗಳ ಮಸೂದೆ- 2025 ಅಂತಿಮಗೊಂಡು ಕಾಯಿದೆಯಾಗಿ ಜಾರಿಯಾಗಿಲ್ಲ. ಹೀಗಾಗಿ, ಜಾರಿಗೆ ಬಾರದ ಮಸೂದೆ ಅನ್ವಯ ಯಾವುದೇ ಪರವಾನಗಿ ಪಡೆಯುವಂತೆ ಅರ್ಜಿದಾರರಿಗೆ ಒತ್ತಾಯಿಸಬಾರದು ಎಂದಿರುವ ಹೈಕೋರ್ಟ್‌.

Bar & Bench

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಬೀಜಗಳ ಮಸೂದೆ- 2025ರ ಅನ್ವಯ  ಹೊಸ ಪರವಾನಗಿ ಪಡೆಯುವಂತೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೀಜದ ಸಗಟು, ಚಿಲ್ಲರೆ ಮಾರಾಟ ಮತ್ತು ವಿತರಕರಿಗೆ ಒತ್ತಾಯ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಜಾರಿಯಾಗದ ಬೀಜಗಳ ಕಾಯಿದೆ- 2025ರ (ಮಸೂದೆ ರೂಪದಲ್ಲಿರುವ) ಪ್ರಕಾರ ಹೊಸ ಪರವಾನಗಿ ಪಡೆಯುವಂತೆ ರಾಜ್ಯ ಸರ್ಕಾರದ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಸುವರ್ಣ ಹೈಬ್ರೀಡ್‌ ಸೀಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸೇರಿದಂತೆ ಒಟ್ಟು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೀಜದ ಮಾರಾಟ, ವಿತರಣೆ ಮತ್ತು ಜಾಹೀರಾತು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಎಂಟು ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ಪೀಠ ವಿಲೇವಾರಿ ಮಾಡಿದೆ.

ಬೀಜಗಳ ಮಸೂದೆ- 2025 ಅಂತಿಮಗೊಂಡು ಕಾಯಿದೆ ರೂಪದಲ್ಲಿ ಜಾರಿಗೆ ಬಂದಿಲ್ಲ.‌ ಸರ್ಕಾರಿ ವಕೀಲರು ನೀಡಿರುವ ಮಾಹಿತಿಯಂತೆ ಇನ್ನೂ ಮಸೂದೆಯು ಅನುಮೋದನೆ ಪಡೆದು ಅಂಗೀಕಾರಗೊಂಡಿಲ್ಲ. ಹೀಗಾಗಿ, ಜಾರಿಗೆ ಬಾರದ ಮಸೂದೆ ಅನ್ವಯ ಯಾವುದೇ ಪರವಾನಗಿ ಪಡೆಯುವಂತೆ ಅರ್ಜಿದಾರರಿಗೆ ಒತ್ತಾಯಿಸಬಾರದು.‌

ಅರ್ಜಿದಾರರ ಚಟುವಟಿಕೆಗಳನ್ನು ಅಸ್ತಿತ್ವದಲ್ಲಿರುವ ಶಾಸನಬದ್ಧ ಚೌಕಟ್ಟಿನ ಪ್ರಕಾರ ಅಂದರೆ ಬೀಜಗಳ ನಿಯಂತ್ರಣ–1983ರ ಆದೇಶದ ಅಡಿಯಲ್ಲಿ ನೀಡಲಾದ ಪರವಾನಗಿ ಅನುಸಾರವೇ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು  ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಮಾಡಿದೆ.

ಬೀಜ‌ಗಳ ಕಾಯಿದೆ–1966 ಮತ್ತು ಬೀಜಗಳ ನಿಯಂತ್ರಣ ಆದೇಶ-1983 ಪ್ರಕಾರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೀಜದ ನಡುವೆ ಪ್ರತ್ಯೇಕ ವ್ಯಾಖ್ಯಾನವಿಲ್ಲ.‌‌ ಒಮ್ಮೆ ರಾಜ್ಯ ಸರ್ಕಾರದ ಕೃಷಿ‌ ಇಲಾಖೆಯ ಜಂಟಿ ನಿರ್ದೇಶಕರಿಂದ ಪರವಾನಗಿ ಪಡೆದರೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೀಜವನ್ನು ಆಮದು ಅಥವಾ ರಫ್ತು ಮಾಡಬಹುದು. ತಮ್ಮದೇ ಆದ ಬ್ರಾಂಡ್ ಅನ್ನು ಮಾರ್ಕೆಟಿಂಗ್ ಹಾಗೂ ವಿತರಣೆ ಮಾಡಬಹುದು. ಚಿಲ್ಲರೆ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಸದ್ಯ ಕೇಂದ್ರ ಸರ್ಕಾರವು  ಬೀಜ ಕಾಯಿದೆ- 2025 ಜಾರಿಗೆ ತರಲು ಉದ್ದೇಶಿಸಿದೆ. ಅದು ಅಂಗೀಕಾರಗೊಂಡು ಅಂತಿಮ ರೂಪ‌ ಪಡೆದಿಲ್ಲ. ಸದ್ಯ ಮಸೂದೆ ಸ್ವರೂಪದಲ್ಲಿದೆ. ಅದರ ಪ್ರಕಾರ ಕೃಷಿ ಬೀಜ, ತೋಟಗಾರಿಕೆ ಬೆಳೆಗಳ ಬೀಜಗಳ‌ (ಫೀಲ್ಡ್ ಕ್ರಾಪ್- ಆಯಿಲ್ ಕ್ರಾಪ್) ರಾಜ್ಯ ವ್ಯಾಪಿಯಾಗಿ ಮಾರಾಟ, ಮಾರುಕಟ್ಟೆ ಮತ್ತು ವಿತರಣೆಗೆ ಡೀಲರ್‌ಗಳು, ಸಗಟು, ಚಿಲ್ಲರೆ, ಮಾರಾಟ, ವಿತರಕರು ಹೊಸ ಹಾಗೂ ಪ್ರತ್ಯೇಕವಾಗಿ ಪರವಾನಗಿ ಪಡೆಯಬೇಕಿರುತ್ತದೆ.‌ ಕೇಂದ್ರ ಸರ್ಕಾರದಿಂದ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ವಲಯಗಳ ಸಮಿತಿಗಳು ಕಂಪನಿಗಳಿಗೆ ಪರವಾನಗಿ ನೀಡಬೇಕು. ಡೀಲರ್ ಚಿಲ್ಲರೆ, ವಿತರಕರು ಮತ್ತು ಸಗಟು ಬೀಜ ವ್ಯಾಪಾರಿಗಳು ರಾಜ್ಯ ಕೃಷಿ‌ ಇಲಾಖೆ ಜಂಟಿ ನಿರ್ದೇಶಕರು ಬಳಿ ಪರವಾನಗಿ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಅದರ ಬಗ್ಗೆಯೂ ಸ್ಪಷ್ಟತೆಗಳಿಲ್ಲ.‌ ಅಂದರೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ಪರವಾನಗಿ ಪಡೆಯಬೇಕಿರುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮತ್ತೊಂದೆಡೆ ಉದ್ದೇಶಿತ ಬೀಜ ಮಸೂದೆ- 2025 ಅನುಸಾರ ಪ್ರತ್ಯೇಕ ಪರವಾನಗಿ ಪಡೆಯುವಂತೆ ರಾಜ್ಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಲವಂತ ಮಾಡುತ್ತಿದ್ದಾರೆ. ಇದರಿಂದ ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ಬೀಜದ ಮಾರಾಟ, ವಿತರಕರು, ಡೀಲರ್ ಮತ್ತು ಚಿಲ್ಲರೆ ಮತ್ತ ಸಗಟು ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕಾಯಿದೆಯು ಬಹುರಾಷ್ಟ್ರೀಯ ಕಂಪನಿಗೆ ಅನುಕೂಲ‌ಮಾಡಿಕೊಡುವ ಉದ್ದೇಶಿದಿಂದ‌ ಹೊಸ ಕಾಯಿದೆ ಜಾರಿಗೆ ತರಲು ಉದ್ದೇಶಿಲಾಗಿದೆ.

ಆದ್ದರಿಂದ ಉದ್ದೇಶಿತ ಬೀಜಗಳ ಮಸೂದೆ ಅನುಸಾರ ತಮಗೆ ಹೊಸ/ ಪ್ರತ್ಯೇಕ ಪರವಾನಗಿ ಪಡೆಯಲು‌ ಒತ್ತಾಯ ಮಾಡದಂತೆ ಪ್ರತಿವಾದಿಗಳಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಕಂಪನಿಗಳು  ಕೋರಿವೆ.

Suvarna Hybrid Seeds Pvt Ltd & others Vs Union of India.pdf
Preview